ಧರ್ಮಸ್ಥಳ | ಹಿಂಸಾತ್ಮಕವಾಗಿ ದನಗಳ ಅಕ್ರಮ ಸಾಗಾಟ: ಬಿಜೆಪಿ ಕಾರ್ಯಕರ್ತರ ಸಹಿತ ನಾಲ್ವರ ಬಂಧನ

ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ದನ-ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಧರ್ಮಸ್ಥಳ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Update: 2023-07-13 09:23 GMT

ಬೆಳ್ತಂಗಡಿ, ಜು.13: ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ದನ-ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಧರ್ಮಸ್ಥಳ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಕ್ರಿಯ ಬಿಜೆಪಿ ಕಾರ್ಯಕರ್ತರೆನ್ನಲಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್ ಹಾಗೂ ಹಾಸನ ಜಿಲ್ಲೆಯ ಕಸಬಾ ಹೋಬಳಿ, ಅರಕಲಗೂಡು ನಿವಾಸಿ ಚೆನ್ನಕೇಶವ ಮತ್ತು ಹೊಳೆನರಸೀಪುರ ನಿವಾಸಿ ಸಂದೀಪ್ ಹಿರೇಬೆಳಗುಳಿ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಸಾಗಾಟಕ್ಕೆ ಬಳಸಿದ ಮೂರು ವಾಹನಗಳು, 6 ದನ ಮತ್ತು 2 ಗಂಡು ಕರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ: ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಧರ್ಮಸ್ದಳ ಠಾಣೆಯ ಎಸ್ಸೈ ಅನಿಲ್ ಕುಮಾರ್ ನೇತೃತ್ವದ ತಂಡ ಜು.12ರಂದು ರಾತ್ರಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿತ್ತು. ರಾತ್ರಿ 8:45ರ ಸುಮಾರಿಗೆ ಉಜಿರೆ ಕಡೆಯಿಂದ ಧರ್ಮಸ್ಥಳದತ್ತ ಬರುತ್ತಿದ್ದ ಎರಡು ಪಿಕಪ್ ಸೇರಿದಂತೆ ಮೂರು ವಾಹನಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ವಾಹನದಲ್ಲಿ ಆರು ದನಗಳು, ಎರಡು ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡುಬಂದಿತ್ತು. ವಾಹನದಲ್ಲಿದ್ದವರನ್ನು ಪೊಲೀಸರು ವಿಚಾರಿಸಿದಾಗ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಾಹನ ಸಹಿತ ಜಾನುವಾರುಗಳನ್ನು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆದ ಜಾನುವಾರುಗಳ ಅಂದಾಜು ಮೌಲ್ಯ 65 ಸಾವಿರ ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 7 ಲಕ್ಷ ರೂ. ಸೇರಿದಂತೆ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂ 7.65 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News