ತೊಕ್ಕೊಟ್ಟು | ಹಳಿ ಮೇಲೆ ಕಲ್ಲುಗಳನ್ನಿರಿಸಿದ್ದ ಕಿಡಿಗೇಡಿಗಳು: ರೈಲು ಸಂಚಾರದ ವೇಳೆ ಕೇಳಿಸಿದ ಸದ್ದಿಗೆ ಬೆಚ್ಚಿದ ಸ್ಥಳೀಯರು

Update: 2024-10-21 07:00 GMT

ಉಳ್ಳಾಲ: ರೈಲು ಹಳಿಯಲ್ಲಿ ಕಿಡಿಗೇಡಿಗಳು ಜಲ್ಲಿಕಲ್ಲುಗಳನ್ನು ಇಟ್ಟಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪದ ಗಣೇಶ್ ನಗರ, ಕಾಪಿಕಾಡ್ ನಡುವೆ ಶನಿವಾರ ರಾತ್ರಿ ನಡೆದಿದೆ. ಕಲ್ಲುಗಳಿದ್ದ ಹಳಿ ಮೇಲೆ ರೈಲು ಸಂಚರಿಸಿದಾಗ ಆದ ಶಬ್ದಕ್ಕೆ ಸ್ಥಳೀಯರು ಆತಂಕಗೊಂಡಿದ್ದರು.

ಶನಿವಾರ ರಾತ್ರಿ ಕೇರಳದಿಂದ ಮಂಗಳೂರು ಕಡೆಗೆ ರೈಲು ಸಂಚರಿಸಿದ ವೇಳೆ ದೊಡ್ಡ ಪ್ರಮಾಣದ ಸದ್ದು ಕೇಳಿಸಿದೆ. ಇದರಿಂದ ಸ್ಥಳೀಯ ಮನೆಗಳಲ್ಲಿ ಕಂಪನ ಅನುಭವ ಉಂಟಾಗಿದ್ದು, ಜನರು ಭಯಭೀತರಾಗಿದ್ದರು. ಸದ್ದು ಕೇಳಿಸಿದ್ದರಿಂದ ಸ್ಥಳೀಯರು ಟಾರ್ಚ್ ಹಿಡಿದು ಹಳಿ ಸಮೀಪ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿಗಳ ಪತ್ತೆಗಾಗಿ ಶೋಧ

ದುಷ್ಕರ್ಮಿಗಳು ಎರಡೂ ಹಳಿಗಳಲ್ಲಿ ಜಲ್ಲಿಕಲ್ಲನ್ನು ಸಾಲಾಗಿ ಜೋಡಿಸಿಟ್ಟಿದ್ದರು. ರಾತ್ರಿ ವೇಳೆ ಇಬ್ಬರು ಹಳಿ ಮೇಳೆ ಸಂಚರಿಸುವುದು ಕಂಡಿದ್ದೇವೆ. ಅವರೇ ಈ ಕೃತ್ಯ ಎಸಗಿರುವ ಶಂಕೆ ಇರುವುದಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ

ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ರಾತ್ರಿ ವೇಳೆ ಸಿಸಿಟಿವಿ ಪರಿಶೀಲನೆ ಮಾಡಲಿಲ್ಲ. ಇದೀಗ ಇಂಜಿನಿಯರ್, ಅಧಿಕಾರಿಗಳು ಎಲ್ಲಾ ಜತೆಯಾಗಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸ್ಥಳೀಯ ನಿವಾಸಿ ರಾಜೇಶ್ ರೈಲ್ವೇ ಸಲಹಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ್ದು, ರೈಲ್ವೇ ಸಲಹಾ ಸಮಿತಿ ಸದಸ್ಯರ ದೂರಿನಂತೆ ಉಳ್ಳಾಲ ಪೊಲೀಸರು ಮತ್ತು ರೈಲ್ವೇ ಸಿಬಂದಿ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News