ಪಾಡಿಗಾರು ಲಕ್ಷ್ಮೀನರಸಿಂಹ ಉಪಾಧ್ಯ

ಉಡುಪಿ: ಉಡುಪಿ ಪಾಡಿಗಾರಿನ ಲಕ್ಷ್ಮೀನರಸಿಂಹ ಉಪಾಧ್ಯ (75) ಶನಿವಾರ ಅಲ್ಪಕಾಲದ ಅಸೌಖ್ಯ ದಿಂದ ನಿಧನರಾದರು. ಉಡುಪಿಯ ವಿವದ್ಯಾದಾಯಿನಿ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಮಾಡಿದ್ದ ಇವರು ತೆಂಕುತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಪಡ್ರೆ ಚಂದು ಅವರ ಶಿಷ್ಯರಾಗಿ ದ್ದರು. ಇವರು ಮಲ್ಪೆ ಶಂಕರನಾರಾಯಣ ಮತ್ತು ಕೊಳ್ಯೂರು ರಾಮಚಂದ್ರ ರಾಯರೊಂದಿಗೆ ಸಹವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದರು.
ಕುತ್ಯಾಳ ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿ ವೇಷ ಮಾಡಿದ್ದ ಇವರು, ಬಳಿಕ ವಿವಿಧ ಮೇಳಗಳಲ್ಲಿ, ಹವ್ಯಾಸಿ ಸಂಘಗಳಲ್ಲಿ ಅತಿಥಿ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು. ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ಮಂಡಳಿಯಲ್ಲಿ ಸ್ತ್ರೀವೇಷಧಾರಿಯಾಗಿಯೂ ಪಾತ್ರ ಮಾಡಿದ್ದರು. ಉಪಾಧ್ಯರು ಪತ್ನಿ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.