ಹುಬ್ಬಳ್ಳಿ | ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ‌ : ಗೃಹ ಸಚಿವ ಪರಮೇಶ್ವರ್

Update: 2024-05-20 15:43 GMT

ಹುಬ್ಬಳ್ಳಿ : ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹತ್ಯೇಗೀಡಾದ ಇಬ್ಬರು ಯುವತಿಯರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ, ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಪಕ್ಷದವರು ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಅನೇಕ ವಿಚಾರಗಳನ್ನು ತಮ್ಮ ಮುಂದೆ ಹೇಳಲು ಆಗುವುದಿಲ್ಲ. ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ಕೃತ್ಯಕ್ಕೆ ಕಾರಣ ಏನೆಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದರು.

ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂಬ ಉದ್ದೇಶದಿಂದ ಈ ಎರಡು ಕೊಲೆ ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿದೆ. ಸ್ಥಳೀಯ ಪೊಲೀಸರು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಆರೋಪಗಳು ಬರಬಹುದು. ಹೀಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ವಿಪಕ್ಷದವರು ನೇಹಾ ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣಕಟ್ಟುವ ಪ್ರಯತ್ನ ಮಾಡಿದರು. ಅನೇಕರ ಹೇಳಿಕೆಯನ್ನು ಪೊಲೀಸ್ ಇಲಾಖೆ ಗಮನಿಸಿದೆ. ಪ್ರಕರಣದ ಆರೋಪಿ ಯಾವ ಉದ್ದೇಶಕ್ಕಾಗಿ ಕೃತ್ಯ ಎಸಗಿದ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಮೂಲಾಂಶವನ್ನು ತನಿಖೆಯಿಂದ ಹೊರತರಬೇಕು ಎಂಬುದು ನಮ್ಮ ಉದ್ದೇಶ. ಇಲಾಖೆ ಆ ಕೆಲಸವನ್ನು ಈಗಾಗಲೇ ಮಾಡುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ ಎಂದು ಹೇಳಿದರು.

ಅಂಜಲಿ ನಿವಾಸಕ್ಕೆ ಭೇಟಿ ನೀಡಿದ ವೇಳೆ ಯುವತಿಯ ಅಜ್ಜಿಯನ್ನು ಮಾತನಾಡಿಸಿದೆ. ದೂರು ಕೊಡಲು ಠಾಣೆಗೆ ಹೋಗಿರುವುದಾಗಿ ಹೇಳಿದರು. ಈ ವೇಳೆ ಅಲ್ಲಿ ಸರಿಯಾಗಿ ಸ್ಪಂದಿಸಿಲ್ಲ. ಅದಕ್ಕೆ ಬೇಸರ ಆಯ್ತು ಎಂದರು. ದೂರು ನೀಡಿದ ಕೂಡಲೇ ಕ್ರಮ ತೆಗೆದುಕೊಂಡಿದ್ದರೆ ಕೃತ್ಯ ಸಂಭವಿಸುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಅದರ ವರದಿ ಬದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ಯಾರೇ ತಪ್ಪೆಸಗಿದ್ದರು ಸುಮ್ಮನೆ ಬಿಡುವ ಪ್ರಮೇಯವಿಲ್ಲ ಎಂದು ಎಚ್ಚರಿಸಿದರು.

ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರ ಅವಧಿಯಲ್ಲಿ 2021 ಜನವರಿ ತಿಂಗಳಿನಿಂದ ಎಪ್ರಿಲ್ ವರೆಗೆ (4 ತಿಂಗಳ ಅಂಕಿ-ಅಂಶ) 499 ಕೊಲೆ ಪ್ರಕರಣಗಳು, 2022 ಜನವರಿಯಿಂದ ಎಪ್ರಿಲ್‍ವರೆಗೆ 466, 2023ರ ಜನವರಿಯಿಂದ ಎಪ್ರಿಲ್ ವರೆಗೆ 431, 2024 ಜನವರಿಯಿಂದ ಎಪ್ರಿಲ್ ವರೆಗೆ 430 ಕೊಲೆ ಪ್ರಕರಣಗಳು ವರದಿಯಾಗಿವೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಯಾರ ಅವಧಿಯಲ್ಲಿ ಹೆಚ್ಚು ಕೊಲೆ ಪ್ರಕರಣಗಳು ವರದಿಯಾಗಿವೆ ಎಂಬುದು ಸ್ಪಷ್ಟ ಎಂದರು.

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News