ಸಂತೋಷ್ ಲಾಡ್‌ಗೆ ಪ್ರಧಾನಿ ಮೋದಿಯವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ: ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ: ಜಮ್ಮು-ಕಾಶ್ಮೀರದ ಪೆಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ಕ್ರೂರ ದಾಳಿಯನ್ನು ಇಡೀ ದೇಶವೇ ಖಂಡಿಸಿದೆ. ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದು ಎಲ್ಲರೂ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಆದರೆ, ಸಚಿವ ಸಂತೋಷ್ ಲಾಡ್ ಅವರು ಪ್ರಧಾನಿ ರಾಜೀನಾಮೆ ಕೇಳುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ಷೇಪಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಮೃತರಿಗೆ ಸಂತಾಪ ಕಾರ್ಯಕ್ರಮ ನಡೆಯುತ್ತಿವೆ. ಪ್ರಧಾನಿ ನಿರ್ಣಯಕ್ಕೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಮತ ಸೂಚಿಸಿದ್ದಾರೆ. ಆದರೆ, ಸಚಿವ ಸಂತೋಷ ಲಾಡ್ ಹಾಗೂ ಕಾಂಗ್ರೆಸ್ ವಕ್ತಾರ ದೇಶದ ಮಿಲಿಟರಿ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆಂದು ಟೀಕಿಸಿದರು.
ಕಾಶ್ಮೀರದ ಸಮಸ್ಯೆ ಬಗ್ಗೆ ಸಂತೋಷ ಲಾಡ್ ಅರ್ಥ ಮಾಡಿಕೊಳ್ಳಬೇಕು. ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಶ್ಮೀರದಲ್ಲಿನ ಸಮಸ್ಯೆಗಳಿಗೆ ಕಾಂಗ್ರೆಸ್‍ನ ನೆಹರೂ ಅವರೇ ಕಾರಣ. ಪ್ರಧಾನಿ ಮೋದಿ ರಾಜೀನಾಮೆ ಕೇಳಲು ಇವರಿಗೆ ಯಾವ ನೈತಿಕತೆ ಇದೆ ಎಂದು ಅವರು ತಿಳಿಸಿದರು.
ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದರ ಪರಿಣಾಮ ಇಂದು ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದನ್ನು ಸಹಿಸದ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಇದರ ಬಗ್ಗೆ ಸಂತೋಷ ಲಾಡ್ ಮಾತನಾಡಬೇಕಿತ್ತು. ಅದು ಬಿಟ್ಟು ಪ್ರಧಾನಿ ಮೋದಿಯವರ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.