‘ಕೇಂದ್ರ ಸರಕಾರದ ಮೇಲೆ ಸುಪ್ರೀಂ ಚಾಟಿ’ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ: ಸಂತೋಷ್ ಲಾಡ್
ಧಾರವಾಡ : ಮಸೂದೆಗಳಿಗೆ ಸಹಿ ಹಾಕುವಂತೆ ರಾಜ್ಯಪಾಲರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡುವ ಮೂಲಕ, ಕೇಂದ್ರ ಸರಕಾರಕ್ಕೆ ಚಾಟಿ ಬೀಸಿರುವುದನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಂಗಳವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪರವಾದ ತೀರ್ಪುನ್ನು ಸುಪ್ರೀಂಕೋರ್ಟ್ ನೀಡಿದರೆ ಗ್ರೇಟ್ ಎಂದು ಹೇಳುತ್ತಾರೆ. ಅದೇ ಕೇಂದ್ರ ಸರಕಾರದ ಕಾರ್ಯವೈಖರಿ ವಿರುದ್ಧ ತೀರ್ಪು ನೀಡಿದರೆ ಪ್ರಶ್ನೆ ಮಾಡುತ್ತಾರೆ ಎಂದು ಹೇಳಿದರು.
ಮಸೂದೆಗಳಿಗೆ ರಾಜ್ಯಪಾಲರು ವಿಳಂಬ ಮಾಡುವುದನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ಜಯ ಪಡೆದಿವೆ. ಈ ಆದೇಶ ಕೇಂದ್ರದ ಮೋದಿ ಸರಕಾರಕ್ಕೆ ಇರಿಸು ಮುರಿಸು ಉಂಟು ಮಾಡಿದೆ ಎಂದು ಸಂತೋಷ್ ಲಾಡ್ ತಿಳಿಸಿದರು.
ಸುಪ್ರೀಂ ಕೋರ್ಟ್ ಸಂವಿಧಾನದಲ್ಲಿ ತನಗಿರುವ ವಿಶೇಷ ಅಧಿಕಾರದ ಕಲಂ 142 ನ್ನು ಬಳಸಿಕೊಂಡಿದೆ. ಸುಪ್ರೀಂಕೋರ್ಟ್ ಏನಾದರೂ ಕೇಂದ್ರ ಸರಕಾರವನ್ನು ಪ್ರಶ್ನಿಸಿದರೆ ಬಿಜೆಪಿಯವರು ಕೋರ್ಟ್ ವಿರುದ್ಧ ಮುಗಿ ಬೀಳುತ್ತಾರೆ. ಎಲ್ಲೆಲ್ಲಿ ರಾಜ್ಯಪಾಲರು ಮಸೂದೆಗಳನ್ನು ಹೆಚ್ಚು ಅವಧಿಗೆ ಬಾಕಿ ಇಟ್ಟುಕೊಂಡಿದ್ದಾರೋ ಅದನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ರಾಜ್ಯಪಾಲರಿಗೆ ಗಡುವು ನೀಡಿದೆ. ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯವರು ಅಧಿಕಾರದಲ್ಲಿರುವ ಇಪ್ಪತ್ತು ರಾಜ್ಯಗಳಲ್ಲಿ ರಾಜ್ಯಪಾಲರು ಮಾತ್ರ ಯಾವುದೇ ಮಸೂದೆಗಳನ್ನು ತಡೆ ಹಿಡಿಯುವುದಿಲ್ಲ. ರಾಜ್ಯಪಾಲರಿಗೆ ಮಸೂದೆಗಳ ಮೇಲೆ ಯಾವುದೇ ಆಕ್ಷೇಪಣೆ ಇರುವುದಿಲ್ಲ. ಆದರೆ ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಮಾತ್ರವೇ ಈ ರಾಜ್ಯಪಾಲರಿಗೆ ಆಕ್ಷೇಪ ಇರುತ್ತದೆ. ಸುಪ್ರೀಂಕೋರ್ಟ್ ಎಲ್ಲವನ್ನು ಸಂವಿಧಾನಬದ್ಧವಾಗಿ ಮಾಡುತ್ತಿದೆ. ಆದರೆ ಇದು ಬಿಜೆಪಿಯವರಿಗೆ ಸಹಿಸಲು ಆಗುವುದಿಲ್ಲ. ಅವರಿಗೆ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದು ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.