ಯಾರದೋ ಮಾತು ಕೇಳಿ ಸ್ಪೀಕರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ

ಜಗದೀಶ್ ಶೆಟ್ಟರ್
ಹುಬ್ಬಳ್ಳಿ : ಯಾರದೋ ಮಾತು ಕೇಳಿ ಸ್ಪೀಕರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು, ಆಶಿಸ್ತು ಪ್ರದರ್ಶಿಸಿದಾಗ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಆದರೆ ಪ್ರತಿಭಟನೆ ಮಾಡಿದಕ್ಕೆ ಅಮಾನತು ಮಾಡಿರೋದು ಸರಿಯಲ್ಲ ಎಂದರು.
ಸರ್ಕಾರ ಭಂಡತನ ತೋರಿದಾಗ ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಸ್ಪೀಕರ್ ತಮ್ಮ ಕಚೇರಿಗೆ ಕರೆಯಿಸಿ ಬುದ್ಧಿ ಹೇಳಿ, ಎಚ್ಚರಿಕೆ ನೀಡಬಹುದಿತ್ತು. ಆದರೆ ಆರು ತಿಂಗಳ ಕಾಲ ಅಮಾನತು ಮಾಡಿರೋದು ಅತ್ಯಂತ ಖಂಡನೀಯ. ಈ ರೀತಿಯ ಘಟನೆ ಹಿಂದೆ ನಡೆದಿರಲಿಲ್ಲ ಎಂದು ಹೇಳಿದರು.
ಈ ಹಿಂದೆ ಸಿದ್ಧರಾಮಯ್ಯ ಸದನದ ಬಾಗಿಲನ್ನೇ ಒದ್ದಿದ್ದರು. ಆಗ ಅವರನ್ನು ಅಮಾನತು ಮಾಡಲಾಗಿತ್ತೇ.? ಪೇಪರ್ ಹರಿದು ಹಾಕೋದು ಈಗ ಕಾಮನ್ ಆಗಿಬಿಟ್ಟಿದೆ. ಸ್ಪೀಕರ್ ಪೀಠಕ್ಕೆ ಹೋಗಿ ಅವರಿಗೆ ದೈಹಿಕವಾಗಿ ಹಲ್ಲೆ ಮಾಡಿದ್ದರೆ ಅಮಾನತು ಮಾಡಬಹುದಿತ್ತು. ಆದರೆ ಯಾರದೋ ಮಾತು ಕೇಳಿ ಆರು ತಿಂಗಳು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ಸ್ಪೀಕರ್ ಅವರು ಸ್ವಯಂ ಪ್ರೇರಣೆಯಿಂದ ಅಮಾನತು ರದ್ದು ಮಾಡಬೇಕು. ಶಾಸಕರ ಹಕ್ಕುಗಳನ್ನು ಕಿತ್ತುಕೊಂಡು ಸಂವಿಧಾನ ಬಾಹಿರ ನಡೆ ಅನುಸರಿಸಿದ್ದಾರೆ. ಕೂಡಲೇ ಅಮಾನತನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.
ಸಿಎಂ ಅವರ ಪ್ರಚೋದನೆಯಿಂದಲೇ ಇದೆಲ್ಲ ನಡೆದಿದೆ. ಸಿದ್ದರಾಮಯ್ಯ ಅವರೇ ಇದನ್ನು ಹಿಂದೆ ಪಡೆಯುವಂತೆ ನೋಡಿಕೊಳ್ಳಬೇಕು ಎಂದರು.