‘ಭೀಮ ಹೆಜ್ಜೆ’ ಆಚರಿಸದೇ ಇರುವುದಕ್ಕೆ ಖರ್ಗೆ ದೇಶದ ಕ್ಷಮೆ ಕೇಳಲಿ : ಪ್ರಹ್ಲಾದ್ ಜೋಶಿ

Update: 2025-04-13 19:06 IST
‘ಭೀಮ ಹೆಜ್ಜೆ’ ಆಚರಿಸದೇ ಇರುವುದಕ್ಕೆ ಖರ್ಗೆ ದೇಶದ ಕ್ಷಮೆ ಕೇಳಲಿ : ಪ್ರಹ್ಲಾದ್ ಜೋಶಿ
  • whatsapp icon

ಹುಬ್ಬಳ್ಳಿ : ರಾಜ್ಯದಲ್ಲಿ ಅಂಬೇಡ್ಕರ್ ಬೆಳಗಾವಿಯ ನಿಪ್ಪಾಣಿಗೆ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸದಂತೆ ನಕಲಿ ಗಾಂಧಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ‘ಭೀಮ ಹೆಜ್ಜೆ ಶತಮಾನ ಸಂಭ್ರಮ' ಒಂದು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡೇ ರಾಜ್ಯ ಸರಕಾರಕ್ಕೆ ಸೂಚಿಸುವ ಮೂಲಕ ಅಂಬೇಡ್ಕರ್ ಗೌರವಾರ್ಥದ ಸಮಾರಂಭವನ್ನು ತಡೆದಿದೆ ಎಂದು ದೂರಿದರು.

ಖರ್ಗೆ ಅವರು ಕ್ಷಮೆ ಕೇಳಲಿ: ರಾಜ್ಯ ಕಾಂಗ್ರೆಸ್ ಸರಕಾರ ಅಂಬೇಡ್ಕರ್ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ ಖರ್ಗೆ ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದರು.

ಯಾವುದೋ ಒತ್ತಡದಿಂದ ಈ ಪ್ರಮಾದವಾಗಿದೆ. ಇದಕ್ಕಾಗಿ ದೇಶದ ಕ್ಷಮೆ ಕೇಳುತ್ತೇವೆ. ಮುಂದೆ ಯಾವುದೇ ರೀತಿ ಚ್ಯುತಿ ಬರದಂತೆ ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಗಳನ್ನು ನಡೆಸುವುದಾಗಿ ಹೇಳಲಿ ಎಂದು ಅವರು ಒತ್ತಾಯಿಸಿದರು.

ಸರಕಾರಕ್ಕೆ ಸೂಚನೆ ನೀಡಲಿ: ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ, ಅವರು ಮಾಡಿದಂತಹ ಅಪ್ರತಿಮ ಕಾರ್ಯಗಳಿಗೆ, ತ್ಯಾಗ-ಬಲಿದಾನಕ್ಕೆ ಗೌರವ ಕೊಟ್ಟು ಖರ್ಗೆ ದೇಶದ ಕ್ಷಮೆಯಾಚಿಸಬೇಕು. ಇನ್ನು ಮುಂದೆಯಾದರೂ ಕಾಂಗ್ರೆಸ್ ಆಡಳಿತ ಇರುವ ಎಲ್ಲ ಕಡೆ ಅಂಬೇಡ್ಕರ್ ಅವರ ಕಾರ್ಯಕ್ರಮಗಳನ್ನು ಗೌರವದಿಂದ ಆಚರಿಸುವಂತೆ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಜೋಶಿ ಸಲಹೆ ನೀಡಿದರು.

ಮಹಾತ್ಮ ಗಾಂಧಿ ಶತಮಾನ ಸಂಭ್ರಮ ಖುಷಿ: ರಾಜ್ಯ ಸರಕಾರ ಮಹಾತ್ಮ ಗಾಂಧಿ ಬೆಳಗಾವಿಗೆ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸಿತು. ಅದೊಂದು ರೀತಿ ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶದಂತಿತ್ತು. ಏನೇ ಆದರೂ ಬೆಳಗಾವಿಗೆ ಮಹಾತ್ಮಗಾಂಧಿ ಅವರು ಬಂದಿದ್ದನ್ನು ಸ್ಮರಿಸಿತು ಎಂಬುದೇ ಒಂದು ಖುಷಿಯ ವಿಚಾರ.

ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಅಂಬೇಡ್ಕರ್ ಬಂದು ಹೋದ ನೂರು ವರ್ಷದ ನೆನಪನ್ನು ನಕಲಿ ಗಾಂಧಿವಾದಿಗಳ ಮಾತು ಕಟ್ಟಿಕೊಂಡು ಕೈಬಿಟ್ಟಿತು ಎಂಬುದು ತೀವ್ರ ನೋವಿನ ಸಂಗತಿ ಎಂದು ಜೋಶಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News