"ಸದನದಲ್ಲಿ ನನ್ನ ಹಿರಿತನಕ್ಕೆ ಬೆಲೆ ಇಲ್ಲ": ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬಸವರಾಜ್ ಹೊರಟ್ಟಿ

ಬಸವರಾಜ ಹೊರಟ್ಟಿ
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೆ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈಗಾಗಲೇ ಬಸವರಾಜ್ ಹೊರಟ್ಟಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ರವಾನಿಸಿದ್ದು, ‘ಮಾ.31ರೊಳಗೆ ನನ್ನ ರಾಜೀನಾಮೆ ಪತ್ರವನ್ನು ಸ್ವೀಕರಿಸಿ ಎಪ್ರಿಲ್ 1ರೊಳಗೆ ಅಂಗೀಕರಿಸಿ ನನ್ನನ್ನು ಸಭಾಪತಿ ಹುದ್ದೆಯಿಂದ ಮುಕ್ತಿಗೊಳಿಸಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಬಸವರಾಜ ಹೊರಟ್ಟಿ ಅವರು ಆ ಪತ್ರಕ್ಕೆ ಸಹಿ ಹಾಕಿಲ್ಲ, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರವಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಸವರಾಜ ಹೊರಟ್ಟಿ, ‘ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸದಸ್ಯರ ವರ್ತನೆ ಸರಿಯಿಲ್ಲ. ರಾಜಕಾರಣ ಕಲುಷಿತವಾಗಿದ್ದು, ಸದನದ ಗೌರವ ಹಾಳಾಗಿ ಬಹಳ ದಿನಗಳಾಗಿವೆ. ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಹಾಗಾಗಿ, ನಾನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಬೇಸರ ಹೊರಹಾಕಿದರು.
ಸದನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ನನಗೆ ಬೇಸರವಾಗಿದೆ. ಸಭಾಪತಿಗೆ ಹೇಳದೇ, ಕೇಳದೇ ಸದನದೊಳಗೆ ಪ್ರತಿಭಟನೆ ನಡೆಸುತ್ತಾರೆ. ಪರಿಷತ್‍ಗೆ ಪ್ಲೇಕಾರ್ಡ್‍ಗಳನ್ನು ತೆಗೆದುಕೊಂಡು ಬರುತ್ತಾರೆ. ಸದನ ನಡೆಸುವುದಕ್ಕೆ ನನಗೆ ಯೋಗ್ಯತೆ ಇಲ್ಲ. ಈ ಬಾರಿಯ ಸದನದಲ್ಲಿ ನಾನು 17ನಿಮಿಷಗಳ ಕಾಲ ಅಸಹಾಯಕನಾಗಿ ಸುಮ್ಮನೆ ಕುಳಿತಿದ್ದೆ. ಇದರಿಂದ ನಾನು ಸದನದಲ್ಲಿ ಇರಬಾರದೆಂದು ತೀರ್ಮಾನ ಮಾಡಿದ್ದೇನೆ ಎಂದು ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಮೇಲ್ಮನೆಯನ್ನು ‘ಚಿಂತಕರ ಛಾವಡಿ’ ಎಂದು ಕರೆಯುತ್ತೇವೆ ಅಲ್ಲಿ ಕೆಲವೊಮ್ಮೆ ಮಹತ್ವದ ಮಸೂದೆಗಳ ಬಗ್ಗೆ ಚರ್ಚೆಗಳಾಗಬೇಕಿರುತ್ತದೆ. ಆದರೆ, ಮೇಲ್ಮನೆಯ ಸದಸ್ಯರು ಇವುಗಳಿಗೆ ಬೆಲೆಯೇ ಕೊಡುವುದಿಲ್ಲ, ವಿನಾಕಾರಣ ಪ್ರತಿಭಟನೆಗೆ ಇಳಿಯುತ್ತಾರೆ. ಸಭಾಪತಿಗಳ ಸೂಚನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಈ ಬಾರಿ ಸದನದಲ್ಲಿ ಮುಸ್ಲಿಮ್ ಮೀಸಲಾತಿ ವಿಚಾರದ ಬಗ್ಗೆ ಸಣ್ಣದೊಂದು ಚರ್ಚೆ ಆಗಿದ್ದು ಬಿಟ್ಟರೆ, ಯಾವುದೇ ವಿಧೇಯಕಗಳ ಬಗ್ಗೆ ಚರ್ಚೆಯೇ ಆಗಲಿಲ್ಲ ಎಂದು ಬಸವರಾಜ ಹೊರಟ್ಟಿ ಹೇಳಿದರು.
‘ನಾನು 45 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ಹಿರಿತನಕ್ಕೆ ಯಾವುದೇ ಬೆಲೆಯಿಲ್ಲ. ಇಂದಿನ ರಾಜಕಾರಣಿಗಳು ನಾನೊಬ್ಬ ಹಿರಿಯ ಎಂಬುದನ್ನೇ ಮರೆತಿದ್ದಾರೆ. ಸದನದಲ್ಲಿ ನನ್ನ ಮಾತಿಗೆ ಬೆಲೆ ಕೊಡುವುದಿಲ್ಲ. ಸದನದಲ್ಲಿ ನಾನು ಬೊಬ್ಬೇ ಹೊಡೆದುಕೊಳ್ಳುತ್ತಿದ್ದರೂ ಯಾರೂ ನನ್ನ ಕಡೆ ಗಮನ ಕೊಡುವುದಿಲ್ಲ’ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನ: ‘ಸದನದ ಬೆಳವಣಿಗೆಗೆ ಸಂಬಂಧಿಸಿದಂತೆ ನಾನು ನನ್ನ ಮನಸ್ಸಿನಲ್ಲಿರುವುದನ್ನು ಹೊರಹಾಕಿದ್ದೇನೆ. ಆದರೆ, ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ನನ್ನ ಸ್ನೇಹಿತರು, ಆಪ್ತರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಅವರು ಏನು ಮಾರ್ಗದರ್ಶನ ನೀಡುತ್ತಾರೋ, ಅದರಂತೆ ಮುಂದುವರಿಯುತ್ತೇನೆ’
-ಬಸವರಾಜ ಹೊರಟ್ಟಿ, ಪರಿಷತ್ ಸಭಾಪತಿ
ಕಾಲ ಕೆಟ್ಟಿದೆ:
‘ರಾಜಕಾರಣಿಗಳನ್ನು ಕಟ್ಟಿ ಹಾಕಲು ಅನೈತಿಕ ಮಾರ್ಗಕ್ಕೆ ಇಳಿಯಲಾಗುತ್ತಿದೆ. ಸದನದಲ್ಲಿ ಈ ಬಾರಿ ಕೇಳಿಬಂದ ಹನಿಟ್ರ್ಯಾಪ್ ಪ್ರಕರಣ ರಾಜ್ಯ ತಲೆತಗ್ಗಿಸುವಂತದ್ದು, ಚುನಾವಣೆಯಲ್ಲಿ ಸೋಲಿಸಲು ಆಗದಿದ್ದರೆ ಈ ತರಹ ಟಾರ್ಗೆಟ್ ಮಾಡುವುದು ಸರಿಯಲ್ಲ. ಕಾಲ ಕೆಟ್ಟಿದೆ ಇದೆಲ್ಲ ದುರ್ದೈವ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.