ಬಿಜೆಪಿಯವರ ಜನಾಕ್ರೋಶ ಯಾತ್ರೆ ಮೋದಿ ವಿರುದ್ಧವೇ ಹೊರತು, ಕಾಂಗ್ರೆಸ್ ವಿರುದ್ಧವಲ್ಲ : ಸಂತೋಷ್ ಲಾಡ್ ವ್ಯಂಗ್ಯ

ಸಂತೋಷ್ ಲಾಡ್
ಧಾರವಾಡ : ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಏಕೆಂದರೆ ಕೇಂದ್ರ ಸರಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ, ದೇಶದ ಜನರನ್ನು ಲೂಟಿ ಮಾಡುತ್ತಿದೆ. ಹೀಗಾಗಿ ಬಿಜೆಪಿಯವರ ಜನಾಕ್ರೋಶ ಯಾತ್ರೆ, ಪ್ರಧಾನಿ ಮೋದಿ ವಿರುದ್ಧವೇ ಹೊರತು, ಕಾಂಗ್ರೆಸ್ ವಿರುದ್ಧವಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.
ಸೋಮವಾರ ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರು ಇನ್ನೂ ಗೊಂದಲದಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಬೆಲೆ ಏರಿಕೆಗೆ ಮೋದಿಯವರೇ ಕಾರಣ ಎಂದು ದೂರಿದರು.
ಪ್ರಧಾನಿ ಮೋದಿ ಸರಕಾರ ಬೆಲೆ ಏರಿಕೆ, ಜಿಎಸ್‍ಟಿ ಮೂಲಕ ಈ ದೇಶದ ಜನರನ್ನು ಸುಲಿಗೆ ಮಾಡುತ್ತಿದೆ. ನಾವು ರೈತರ ಆದಾಯ ಹೆಚ್ಚಿಸುವ ಸದುದ್ದೇಶದಿಂದ ಹಾಲಿನ ದರ ಏರಿಕೆ ಮಾಡಿದರೆ, ರಾಜ್ಯ ಬಿಜೆಪಿ ನಾಯಕರು ಉರಿದು ಬೀಳುತ್ತಾರೆ. ಆದರೆ, ಇವರಿಗೆ ಒಮ್ಮೆಯೂ ಪ್ರಧಾನಿ ಮೋದಿ ಬಳಿ ಈ ಕುರಿತು ಪ್ರಶ್ನೆ ಕೇಳುವ ಧೈರ್ಯವಿಲ್ಲ ಎಂದು ಹೇಳಿದರು.
ಮೋದಿಯವರೇ ಬೆಲೆ ಏರಿಕೆಗೆ ಕಾರಣ ಎಂದು ಬಿಜೆಪಿಯವರಿಗೆ ಹೇಳಲು ಧೈರ್ಯವಿಲ್ಲ. ಅದಕ್ಕೇ ಕಾಂಗ್ರೆಸ್ ಹೆಸರು ಹೇಳಿ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ಎಂದು ಸಂತೋಷ್ ಲಾಡ್ ವ್ಯಂಗ್ಯವಾಡಿದರು.
ಬಿಜೆಪಿ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಇವರು ಶೇಕಡಾವಾರು ಮಾತನಾಡಲಿ. ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.