ಅಂದಿಗೂ ಇಂದಿಗೂ ಪ್ರಸ್ತುತ ಸರಸ ವಿರಸ ಸನರಸ

Update: 2024-10-02 09:47 GMT

ವಿಶ್ವ ಕಂಡ ಅದ್ಭುತ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ನ ನಾಟಕಗಳು ಇಂದಿಗೂ ಕೂಡ ಪ್ರಸ್ತುತವೆನಿಸಿವೆ. ಈಗಲೂ ಅವು ರಂಗದ ಮೇಲೆ ಪ್ರಯೋಗಗೊಳ್ಳುತ್ತಲೇ ಇವೆ. ರೋಮಿಯೋ ಜೂಲಿಯೆಟ್, ಮ್ಯಾಕ್‌ಬೆತ್, ಜೂಲಿಯಸ್ ಸೀಸರ್ ಹೀಗೆ ಒಂದೊಂದು ನಾಟಕಗಳೂ ರಂಗಭೂಮಿಗೆ ಶೇಕ್ಸ್‌ಪಿಯರ್ ನೀಡಿದ ಅದ್ಭುತ ಕೊಡುಗೆಗಳು. ಇದರ ಜೊತೆ ‘The taming of the shrew’ ಎಂಬ ನಾಟಕವೂ ಒಂದು. ಗಂಭೀರವಾದ ವಿಷಯವನ್ನು ಹಾಸ್ಯದ ಹೊನಲನ್ನು ಹರಿಸುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವ ಕಥಾ ಹಂದರವನ್ನು ಈ ನಾಟಕ ಹೊಂದಿದೆ.

ಕ್ಯಾಥರಿನ್ ಹಾಗೂ ಬಿಯಾಂಕಾ ಶ್ರೀಮಂತನೊಬ್ಬನ ಮಕ್ಕಳು. ಕ್ಯಾಥರಿನ್ ಅಹಂಕಾರ, ಕೋಪ, ಬಿಗುಮಾನಗಳ ಒಡತಿ. ಬಿಯಾಂಕಾ ನಯ, ವಿನಯ, ನಾಜೂಕಿನ ಹುಡುಗಿ. ವಿವಾಹವಾಗಲು ಬಂದ ಗಂಡುಗಳನ್ನೆಲ್ಲ ಅವಮಾನಿಸಿ ತಿರಸ್ಕರಿಸುವ ಕ್ಯಾಥರಿನ್ ತಂದೆಗೆ ತಲೆ ನೋವಾಗಿ ಪರಿಣಮಿಸಿರುತ್ತಾಳೆ. ಹಿರಿಯ ಮಗಳ ಮದುವೆಯಾಗದ ಹೊರತು ಕಿರಿಯ ಮಗಳ ಮದುವೆ ಸಾಧ್ಯವಿಲ್ಲ ಎಂಬ ಕೊರಗು ತಂದೆಗೆ. ಕ್ಯಾಥರಿನ್‌ಳನ್ನು ಪಳಗಿಸಿ ಅವಳ ಅಹಂಕಾರವನ್ನು ಮುರಿದು ಆಕೆಯನ್ನು ಮದುವೆಯಾಗುವ ಗಂಡಿಗೆ ತನ್ನ ಆಸ್ತಿ ಅಂತಸ್ತುಗಳನ್ನು ನೀಡಲು ಮುಂದಾಗುತ್ತಾನೆ. ಪೆಟ್ರಿಷಿಯೋ ಎಂಬ ಚಾಣಾಕ್ಷನೊಬ್ಬ ಬಗೆ ಬಗೆಯ ಉಪಾಯ ಮಾಡಿ ಕ್ಯಾಥರಿನ್‌ಳನ್ನು ಮದುವೆಯಾಗುತ್ತಾನೆ. ನಂತರ ಅವಳ ಅಹಂಕಾರವನ್ನು ಮುರಿಯುವಲ್ಲಿ ಸಫಲನಾಗುತ್ತಾನೆ. ಬಿಯಾಂಕಾಳನ್ನು ಪ್ರೀತಿಸುತ್ತಿರುವ ಲ್ಯಷೆನ್ಷಿಯೋನೊಂದಿಗೆ ಬಿಯಾಂಕಾಳ ಮದುವೆಯಾಗುತ್ತದೆ. ನಾಟಕದ ಅಂತ್ಯದಲ್ಲಿ ಬರುವ ಸನ್ನಿವೇಶ ಅರ್ಥಪೂರ್ಣವಾಗಿದೆ. ಬಿಯಾಂಕಾಳ ವಿವಾಹ ಸಂಪೂರ್ಣವಾದ ನಂತರ ಅಕ್ಕ-ತಂಗಿಯರಲ್ಲಿ ಯಾರು ತಮ್ಮ ಗಂಡನ ಜೊತೆ ಚೆನ್ನಾಗಿ ಜಗಳವಾಡುತ್ತಾರೋ ಆ ಜೋಡಿಗೆ ತನ್ನ ಸಂಪತ್ತನ್ನೆಲ್ಲ ನೀಡುವೆ ಎಂದು ತಂದೆ ಹೇಳುತ್ತಾನೆ. ಕ್ಯಾಥರಿನ್ ತನ್ನ ಸರದಿ ಬಂದಾಗ ಅತ್ಯಂತ ವಿಧೇಯಳಾಗಿ ‘‘ನನಗೆ ಯಾವ ಸಂಪತ್ತೂ ಬೇಡ. ಎಲ್ಲವೂ ನನ್ನ ತಂಗಿಗೇ ಇರಲಿ. ನನ್ನ ಗಂಡನೇ ನನಗೆ ಸಂಪತ್ತು’’ ಎಂದು ಹೇಳುವ ಮೂಲಕ ಕ್ಯಾಥರಿನ್ ತನ್ನ ಅಹಂಕಾರವನ್ನೆಲ್ಲ ತ್ಯಜಿಸಿದ ನಿರಹಂಕಾರ ಮೂರ್ತಿಯಾಗಿ ಕಾಣುತ್ತಾಳೆ.

ನಾಟಕದ ವಸ್ತು ವಿಷಯ ಸರಳವಾಗಿದ್ದರೂ ಅಧಿಕಾರ, ವರ್ಗ, ಪ್ರೇಮ ಹಾಗೂ ವಿವಾಹಕ್ಕೆ ಅಡ್ಡಿಯಾಗುವ ಸಾಮಾಜಿಕ ಕಟ್ಟುಪಾಡುಗಳು ಚಿಂತನೆಗೀಡು ಮಾಡುತ್ತವೆ. ಇವೆಲ್ಲವನ್ನೂ ಹಾಸ್ಯದ ಮೂಲಕ ಹೇಳುವಲ್ಲಿ ಶೇಕ್ಸ್‌ಪಿಯರ್ ಸಫಲನಾಗಿದ್ದಾನೆ.

ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಶಿವಮೊಗ್ಗದ ರಂಗಾಯಣ ಇತ್ತೀಚೆಗೆ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನದ ಕಲಾವಿದರು ‘The taming of the shrew’ನ್ನು ಕನ್ನಡದಲ್ಲಿ ‘ಸರಸ ವಿರಸ ಸಮರಸ’ ಎಂಬ ನಾಟಕವಾಗಿ ಅದ್ಭುತವಾಗಿ ಪ್ರಸ್ತುತಪಡಿಸಿದರು. ಇದನ್ನು ಕನ್ನಡಕ್ಕೆ ತಂದವರು ಕೆ.ಎಸ್.ರಂಗೇಗೌಡ ಅವರು. ನೀನಾಸಂ ಪದವೀಧರರಾದ ಜೋಸೆಫ್ ಜಾನ್ ಅವರ ಅಮೋಘವಾದ ನಿರ್ದೇಶನದಲ್ಲಿ ಸುಸ್ಥಿರ ಪ್ರತಿಷ್ಠಾನದ ಕಲಾವಿದರು ಪೇಕ್ಷಕರ ಮನಸೂರೆಗೊಂಡರು. ಹಿನ್ನೆಲೆ ಸಂಗೀತ ಹಾಗೂ ನೆರಳು ಬೆಳಕುಗಳು ನಾಟಕವನ್ನು ಮತ್ತಷ್ಟು ರಂಜನೀಯಗೊಳಿಸಿದವು.

ಚಿತ್ರಗಳು: ಸುಸ್ಥಿರ ಪ್ರತಿಷ್ಠಾನ, ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗೌರಿ ಚಂದ್ರಕೇಸರಿ

contributor

Similar News