ಮತ್ತೊಮ್ಮೆ ಎದೆ ಮೀಟಿದ ಚಂದಿರ

ಈ ನಾಟಕದ ವಸ್ತು ವಿನ್ಯಾಸವೇ ನೋಡಿದವರೆಲ್ಲರ ಮನ ಮಿಡಿಯುವಂತಿದೆ. ಅದಕ್ಕೆ ಮಂಗಳಾರಂತಹ ಹಿರಿಯ ನಟಿ, ನುರಿತ ಕಲಾವಿದರ ತಂಡ, ಸ್ವತಃ ಅದ್ಭುತ ನಟರಾದ ಹುಲುಗಪ್ಪ ಕಟ್ಟೀಮನಿಯವರ ಸಮರ್ಥ ನಿರ್ದೇಶನವೂ ಸೇರಿದರೆ ಎಂತಹ ರಸಪಾಕವಾಗಬಲ್ಲದು ಅನ್ನುವುದಕ್ಕೆ ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದ ಪ್ರಯೋಗವೇ ಸಾಕ್ಷಿ.

Update: 2024-08-07 05:10 GMT

26 ವರ್ಷಗಳ ನಂತರ ಮತ್ತೊಮ್ಮೆ ಜೊತೆಗಿರುವನು ಚಂದಿರ ನಾಟಕ ನೋಡಿದೆ.

ಶೊಲೋಮ್ ಅಲೈಖೆಮ್‌ನ ರಶ್ಯನ್ ಕಥೆಗಳನ್ನಾಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ, ಜಗತ್ತಿನ ಶ್ರೇಷ್ಠ ಸಂಗೀತ ನಾಟಕಗಳಲ್ಲೊಂದು ಎಂದು ಮನ್ನಣೆ ಗಳಿಸಿದ ‘ಫಿಡ್ಲರ್ ಆನ್ ದಿ ರೂಫ್’ನ ಕನ್ನಡ ರೂಪವಿದು. ಮೂಲ ನಾಟಕ ಜಾರ್ ದೊರೆಯ ರಶ್ಯದಿಂದ ಉಚ್ಚಾಟಿಸಲ್ಪಟ್ಟ ಅಲ್ಪಸಂಖ್ಯಾತ ಜ್ಯೂ ಕುಟುಂಬದ ಕಥನವಾಗಿದ್ದರೆ, ಜಯಂತ ಕಾಯ್ಕಿಣಿಯವರು ಕನ್ನಡಕ್ಕೆ ತರುವಾಗ ವಿಭಜನೆಯ ಸಂದರ್ಭದ ದಕ್ಷಿಣ ಭಾರತದ ಹಳ್ಳಿಯೊಂದರ ಅಲ್ಪಸಂಖ್ಯಾತ ಸಮುದಾಯದ ಬಡತನ, ತಲ್ಲಣ, ವಿಭಜನೆಯ ಗಾಯದ ನೋವಿನ ಅತ್ಯಂತ ಪರಿಣಾಮಕಾರಿ ಕಥಾನಕವನ್ನಾಗಿ ರೂಪಾಂತರಿಸಿದ್ದಾರೆ. ಹಾಗೆ ತರುವಾಗ ಜ್ಯೂ ಜನರಿಗೇ ವಿಶಿಷ್ಟವಾದ ಮತ್ತು ತೀವ್ರವಾಗಿ ಒಳಗೊಳ್ಳುವ ಲವಲವಿಕೆಯ ಕೌಟುಂಬಿಕತೆ ಮತ್ತು ಹಾಸ್ಯ ಪ್ರಜ್ಞೆಯನ್ನು ಹಾಗೇ ಉಳಿಸಿಕೊಂಡಿದ್ದಾರೆ.

1998ರಲ್ಲಿ ನಾನು ನೋಡಿದ ಮೊದಲ ಪ್ರಯೋಗವನ್ನು ನೀನಾಸಂ ತಿರುಗಾಟಕ್ಕಾಗಿ ನಿರ್ದೇಶಿಸಿದ್ದು ಸುಪ್ರಸಿದ್ಧ ಸಂಗೀತ, ರಂಗ ತಜ್ಞ ಭಾಸ್ಕರ ಚಂದಾವರ್ಕರ್. ಆ ಪ್ರಯೋಗವೂ ಚಂದಾವರ್ಕರ್ ಅವರ ಸಂಗೀತ ಛಾಪಿನೊಂದಿಗೆ ಅತ್ಯುತ್ತಮ ಪ್ರಯೋಗವೆಂದು ಜನಮನ್ನಣೆ ಪಡೆದಿತ್ತು.

ಅದಾದ ನಂತರ ನಾಡಿನ ಅನೇಕ ನಿರ್ದೇಶಕರು ಈ ನಾಟಕವನ್ನು ರಂಗಕ್ಕೆ ತಂದಿದ್ದಾರೆ. ಸಂಕಲ್ಪ ತಂಡದ ಈ ಪ್ರಯೋಗದ ನಿರ್ದೇಶಕ ಹುಲುಗಪ್ಪ ಕಟ್ಟೀಮನಿಯವರೇ ಐದು ತಂಡಗಳಿಗೆ ಈ ನಾಟಕವನ್ನು ನಿರ್ದೇಶಿಸಿರುವುದಾಗಿ ಹೇಳಿದ್ದಾರೆ.ಅದರಲ್ಲೂ ಜೈಲಿನ ಕೈದಿಗಳಿಂದ ಆಡಿಸಿದ ಇದೇ ನಾಟಕದ ಪ್ರಯೋಗವನ್ನು ನೋಡಿದ ಜಯಂತ ಕಾಯ್ಕಿಣಿ ‘‘ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳಾಗಿ ಸಜೆ ಉಣ್ಣುತ್ತಿರುವ ಕೈದಿಗಳು ಅದೇ ಸಮಾಜದ ಮುಂದೆ ಒಂದು ರಂಗಕೃತಿಯಲ್ಲಿ ಅರಳಿ, ಕೊನೆಯಲ್ಲಿ ಕೈ ಕೈ ಹಿಡಿದು ಸಾಲಾಗಿ ನಿಂತು, ಕಣ್ಣಲ್ಲಿ ಕಣ್ಣಿಟ್ಟು ಪ್ರಚಂಡ ಕರತಾಡನ ಸ್ವೀಕರಿಸುತ್ತ, ತಲೆಬಾಗಿದ ಕ್ಷಣ ಆಧ್ಯಾತ್ಮಿಕವಾಗಿತ್ತು’’ ಎಂದು ಬರೆಯುತ್ತಾರೆ.ಕಳೆದ ವರ್ಷ ಈ ನಾಟಕ ಪ್ರಯೋಗಕ್ಕೆ ಕೋಮುವಾದಿಗಳು ಅಡ್ಡಿಪಡಿಸಿದ್ದೂ ಇದೆ!!

ಈ ನಾಟಕದ ವಸ್ತು ವಿನ್ಯಾಸವೇ ನೋಡಿದವರೆಲ್ಲರ ಮನ ಮಿಡಿಯುವಂತಿದೆ.ಅದಕ್ಕೆ ಮಂಗಳಾರಂತಹ ಹಿರಿಯ ನಟಿ, ನುರಿತ ಕಲಾವಿದರ ತಂಡ, ಸ್ವತಃ ಅದ್ಭುತ ನಟರಾದ ಹುಲುಗಪ್ಪ ಕಟ್ಟೀಮನಿಯವರ ಸಮರ್ಥ ನಿರ್ದೇಶನವೂ ಸೇರಿದರೆ ಎಂತಹ ರಸಪಾಕವಾಗಬಲ್ಲದು ಅನ್ನುವುದಕ್ಕೆ ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದ ಪ್ರಯೋಗವೇ ಸಾಕ್ಷಿ.

ಇದಿಷ್ಟು ಈ ನಾಟಕದ ಹಿನ್ನೆಲೆಯ ಅಂಶಗಳಾದರೆ, ಇನ್ನು ಈ ಪ್ರಯೋಗ ಹೇಗಿತ್ತು ಅನ್ನುವುದರ ಬಗ್ಗೆ:

ಕಥೆ ತೀರ ಸರಳವಾಗಿದ್ದರೂ ಅದು ನಮ್ಮಲ್ಲಿ ಮೂಡಿಸುವ ಭಾವ ಸ್ಪಂದನ ಮಾತ್ರ ಅಗಾಧವಾದದ್ದು. ಬಡೇಮಿಯಾ ಅನ್ನುವ ಪುಟ್ಟ ಬೇಕರಿ ನಡೆಸುವ ಬಡ ವ್ಯಕ್ತಿಯ ಮೂವರು ಹೆಣ್ಣು ಮಕ್ಕಳ ಮದುವೆ, ಪ್ರೇಮದ ಸುತ್ತ ನಂತರ ದೇಶ ವಿಭಜನೆಯ ಕಾರಣಕ್ಕೆ ಊರು ತೊರೆಯಬೇಕಾದ ಸನ್ನಿವೇಶದ ಸುತ್ತ ನಡೆಯುವ ಕಥಾನಕ, ಆ ನೆಪದಲ್ಲಿ ತೆರೆದಿಡುವುದು ಅದ್ಭುತವಾದ ಜೀವನ ಪ್ರೀತಿಯ ನಾನಾ ಮಜಲುಗಳನ್ನು, ಸಾಮಾಜಿಕ, ಮಾನವೀಯ ಸಂಬಂಧಗಳ ನಡುವಣ ಸಂಘರ್ಷಗಳನ್ನು, ತನಗೊದಗಿದ ಎಲ್ಲ ಕಷ್ಟ ಕಾರ್ಪಣ್ಯಗಳನ್ನೂ ಆ ಚಂದಿರನೆಂಬ ಆತ್ಮಸಾಕ್ಷಿ ದೊರೆ ಗೆಳೆಯನ ಮುಂದೆ ನಿವೇದಿಸುತ್ತ, ಅವನನ್ನೇ ಗೇಲಿ ಮಾಡುತ್ತ ನಕ್ಕು ಹಗುರಾಗಿ ಮುಂದೆ ಸಾಗುವ, ಪ್ರತಿಯೊಂದು ದುರ್ಭರ ಪ್ರಸಂಗದ ಜಿಗುಟು ಸಿಕ್ಕುಗಳನ್ನೂ ತನ್ನದೇ ಕಲ್ಪನೆಯ ರಸ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ಜೋಪಾನವಾಗಿ ಬಿಡಿಸುತ್ತ ಉದ್ದಕ್ಕೂ ಬದುಕನ್ನು ಸಕಾರಾತ್ಮಕ ನಿಲುವಿನಿಂದ, ಲವಲವಿಕೆಯಿಂದ ತುಂಬುವ ಬಡೇಮಿಯಾನ ಅನನ್ಯ ವ್ಯಕ್ತಿತ್ವವನ್ನು.

ಎಲ್ಲರನ್ನೂ ತನ್ನವರಂತೆ ಬಗೆಯುವ, ಅತ್ಯಂತ ಹೃದಯವಂತ, ಅಕ್ಕರೆಯ ವ್ಯಕ್ತಿತ್ವದ ಬಡೇಮಿಯಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಇಡೀ ನಾಟಕದ ಆಶಯವನ್ನು ಪರಿಣಾಮಕಾರಿಯಾಗಿ ದಾಟಿಸಿದ್ದು ನಿರ್ದೇಶನದ ಹೊಣೆಯಾಚೆಗೂ ಅದ್ಭುತವಾಗಿ ಅಭಿನಯಿಸಿದ ಹುಲುಗಪ್ಪ ಕಟ್ಟೀಮನಿ ಮತ್ತು ಅವರಿಗೆ ಸರಿಸಮನಾಗಿ ನಟಿಸಿದ ಮಂಗಳಾ ಮತ್ತು ಉಳಿದೆಲ್ಲ ಪಾತ್ರಧಾರಿಗಳು.

ಅದರಲ್ಲೂ, ಕೋಮು ಗಲಭೆಗಳ ಕಾರಣ ಮನೆ ತೊರೆದು ಊರು ಬಿಡಬೇಕಾಗಿ ಬಂದಾಗ, ಬಡೇಮಿಯಾ ಹೆಂಡತಿ ತನ್ನ ಮನೆಯನ್ನು ಗುಡಿಸಿ ಚೊಕ್ಕಟವಾಗಿಸಿ, ಮುಂದೆ ಯಾರಾದರೂ ಈ ಮನೆಗೆ ಬಂದವರು ಹಸಿವಿನಿಂದ ಬಳಲದಿರಲಿ ಎನ್ನುತ್ತ ಮೊರದಲ್ಲಿ ಅಕ್ಕಿ ಬೆಲ್ಲವಿಡುವ ಕೊನೇ ದೃಶ್ಯವಂತೂ ನಾಟಕಕ್ಕೊಂದು ಭಾವುಕ ಅಂತ್ಯವನ್ನು ನೀಡಿದ್ದು ಇಡೀ ಪ್ರಯೋಗದ ಹೈಲೈಟ್.

ಮೂಲ ಕೃತಿಯಲ್ಲಿ ಇಲ್ಲದ, ನಾಟಕದ ಈ ಕೊನೆಯ ಮಾತು, ಇಡೀ ನಾಟಕದ ಆಶಯಕ್ಕೆ ನೀಡಿದ ಹೃದಯಸ್ಪರ್ಶಿಯಾದ ತಾರ್ಕಿಕ ಅಂತ್ಯಮತ್ತು ಇದು ನಿರ್ದೇಶಕ ಕಟ್ಟೀಮನಿಯವರ ಕಾಣ್ಕೆ ಎಂದೇ ನನ್ನ ಭಾವನೆ.

ಇನ್ನು, ಬಿವಿ ಕಾರಂತರ ಬಹುಕಾಲದ ಅತ್ಯಂತ ಪ್ರೀತಿಯ ಸಂಗೀತ ಒಡನಾಡಿಯಾಗಿದ್ದ ದಿ. ಶ್ರೀನಿವಾಸ ಭಟ್ ಚೀನಿಯವರ ನಿರ್ದೇಶನದ ಸುಶ್ರಾವ್ಯ ಸಂಗೀತ, ಗಾಯಕ ಮೇಳದ ಮಧುರ ಗಾಯನ, ಅಲ್ಲಲ್ಲಿ ವಿಜೃಂಭಿಸಿದ ಹಾಡು ಕುಣಿತಗಳ ಮೋಡಿ, ಹಿಂದಿ ಚಿತ್ರ ಗೀತೆಗಳ ತುಣುಕುಗಳು, ಪರಿಣಾಮಕಾರಿಯಾದ ಬೆಳಕಿನ ವಿನ್ಯಾಸ, ಅರ್ಥಪೂರ್ಣ ರಂಗ ಸಜ್ಜಿಕೆ, ನಡು ನಡುವೆ ಜೀಕುವ ಎಳೆಯ ಪ್ರೇಮಿಗಳ ಚೇತೋಹಾರಿ ಪಲುಕುಗಳು, ತಮಾಷೆ, ಲವಲವಿಕೆಯ ಗುಂಪು ದೃಶ್ಯ, ಇವೆಲ್ಲವನ್ನೂ ಹದಪಾಕದಲ್ಲಿ ಬೆಸೆದ ರಂಗ ಚಲನೆ ಇಡೀ ನಾಟಕದ ಆಶಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದೆಗಿಳಿಸಿದವು.

ದ್ವೇಷ ಅಸಹನೆಗಳ ಕೋಮು ಧ್ರುವೀಕರಣದಿಂದ ನಲುಗಿ ಹೋಗಿರುವ ಸದ್ಯದ ಪ್ರಕ್ಷುಬ್ಧ ಆತಂಕದ ಸನ್ನಿವೇಶದಲ್ಲಿ, ‘ಜೊತೆಗಿರುವನು ಚಂದಿರ’ನೆಂಬ ಈ ರಂಗಪ್ರಯೋಗ, ನಿಜಕ್ಕೂ ನಮ್ಮೆಲ್ಲರ ಎದೆಯಲ್ಲಿ ಬೀಸಿದ ತಂಗಾಳಿಯೇ ಹೌದು. ಮುಂದೆಯೂ ಎಲ್ಲೆಲ್ಲಿ ಈ ನಾಟಕದ ಪ್ರಯೋಗವಾಗುವುದೋ ಅಲ್ಲೆಲ್ಲ ಸಹೃದಯಿ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಈ ತಂಗಾಳಿಗೆ ಮೈಯೊಡ್ಡಬೇಕು. ಮತ್ತೆ ಮತ್ತೆ ಮತ್ತೆ ಈ ನಾಟಕದ ಪ್ರಯೋಗಗಳು ನಾಡಿನಾದ್ಯಂತ ಪ್ರದರ್ಶನಗೊಳ್ಳಬೇಕು ಅನ್ನುವುದು ನನ್ನ ಆಶಯ.

ಅತ್ಯಂತ ಯಶಸ್ವಿ ಪ್ರಯೋಗ ನೀಡಿದ ಹುಲುಗಪ್ಪ ಕಟ್ಟೀಮನಿ, ಮಂಗಳಾ ಮತ್ತು ನಾಟಕದ ಎಲ್ಲ ಕಲಾವಿದರು, ಹಾಡುಗಾರರು, ಹಿನ್ನೆಲೆ ಕಲಾವಿದರು, ಇಡೀ ಸಂಕಲ್ಪ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - - ಗಿರಿಧರ ಕಾರ್ಕಳ

contributor

Similar News