ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ 7 ಕೋಟಿ ರೂ. ಹಂಚಿಕೆ : ಆರೋಪ
ಹಾಸನ: ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತದಾರರಿಗೆ 7 ಕೋಟಿ ರೂ.ಗೂ ಹೆಚ್ಚು ಹಣ ಹಂಚಿದ್ದಾರೆ ಎಂದು ಆರೋಪಿಸಿ ಆರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಇತರರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಜೆಡಿಎಸ್ ಮುಖಂಡರು ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಅವರು ಜಿಲ್ಲಾ ಪೊಲೀಸ್ ಕಚೇರಿಗೆ ಶುಕ್ರವಾರ ದೂರು ನೀಡಿದ್ದಾರೆ.
ಬಳಿಕ ಕೆ.ಎಸ್ ಲಿಂಗೇಶ್ ಮಾಧ್ಯಮದೊಂದಿಗೆ ಮಾತನಾಡಿ, 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯು ಹಾಸನ ಲೋಕಸಭಾ ಕ್ಷೇತ್ರಕ್ಕೆ 26-4-2024 ರಂದು ನಡೆದಿದ್ದು, ಆ ಸಮಯದಲ್ಲಿ ಆರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡರು ಮತ್ತು ಇನ್ನಿಬ್ಬರ ನಡುವೆ ಹಾಗೂ ಬೇರೆ ಬೇರೆ ವ್ಯಕ್ತಿಗಳ ನಡುವೆ ಮೊಬೈಲ್ ಸಂಭಾಷಣೆ ನಡೆದಿದೆ ಎನ್ನಲಾದ ಆಡಿಯೊ ದಿನಾಂಕ 17 ಅ.2024 ರಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಆಡಿಯೊದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಶ್ರೇಯಸ್ ಪಟೇಲ್ ಅವರ ಪರವಾಗಿ ಮತದಾರರಿಗೆ ಸುಮಾರು 7 ಕೋಟಿಗೂ ಹೆಚ್ಚು ಹಣ ಹಂಚಿಕೆಯ ಬಗ್ಗೆ ಮಾತನಾಡಿದ್ದು, ಪ್ರತೀ ಮತದಾರರಿಗೆ 500 ರೂ.ಹಂಚಿಕೆ ಮಾಡಬೇಕೆಂಬ ಮಾತುಗಳ ತುಣುಕುಗಳು ಆಡಿಯೋದಲ್ಲಿದ್ದು, ಇದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ಮಾಧ್ಯಮ ಜಿಲ್ಲಾ ವಕ್ತಾರ ಹೊಂಗೆರೆ ರಘು, ವಕೀಲ ಪೂರ್ಣಚಂದ್ರ ತೇಜಸ್ವಿ ಇತರರು ಉಪಸ್ಥಿತರಿದ್ದರು.