ಭಾರತಕ್ಕೆ ಸಿಟ್ಟು ಬರಬಹುದು, ಆದರೆ ವಾಕ್‍ಸ್ವಾತಂತ್ರ್ಯ ಬೆಂಬಲಿಸುತ್ತೇವೆ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ
ಟೊರಂಟೊ : ನಾಗರಿಕರ ವಾಕ್‍ಸ್ವಾತಂತ್ರ್ಯವನ್ನು ತಮ್ಮ ಸರಕಾರ ಬೆಂಬಲಿಸುತ್ತದೆ. ಇದು ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರವನ್ನು ಕೆರಳಿಸಿದರೂ ಈ ನಿರ್ಧಾರ ಅಚಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.
ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಭಾರತದ ಹಸ್ತಕ್ಷೇಪದ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು `ಕೆನಡಾದ ಈ ಹಿಂದಿನ ಕನ್ಸರ್ವೇಟಿವ್ ಸರಕಾರವು ಪ್ರಸ್ತುತ ಭಾರತ ಸರಕಾರದೊಂದಿಗೆ ಅತ್ಯಂತ ಸ್ನೇಹಶೀಲ ಸಂಬಂಧಕ್ಕೆ ಹೆಸರಾಗಿದೆ. ಆದರೆ ನಮ್ಮ ಸರಕಾರವು ಕೆನಡಾದಲ್ಲಿನ ಅಲ್ಪಸಂಖ್ಯಾತರನ್ನು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಯಾವತ್ತೂ ಬದ್ಧವಾಗಿದೆ, ಇದು ಭಾರತವನ್ನು ಕೆರಳಿಸಿದರೂ ಸಹ ಈ ನಿಲುವು ಅಚಲ' ಎಂದರು.
ಕೆನಡಾದ ಫೆಡರಲ್ ಚುನಾವಣಾ ಪ್ರಕ್ರಿಯೆಯಲ್ಲಿ ವಿದೇಶಿ ಹಸ್ತಕ್ಷೇಪ ಆರೋಪದ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ವಿಚಾರಣೆಯ ಸಂದರ್ಭ ಟ್ರೂಡೊ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆನಡಾದ ನೆಲದಲ್ಲಿ ಖಾಲಿಸ್ತಾನ್ ಪರ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಪ್ರಕರಣದಲ್ಲೂ ನಾವು ಕೆನಡಿಯನ್ನರ ಪರ ನಿಂತಿದ್ದೇವೆ. ಇದು ಕೆನಡಾ ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ನಮ್ಮ ಸರಕಾರದೆ ಬದ್ಧತೆಯನ್ನು ತೋರಿಸಿದೆ' ಎಂದು ಟ್ರೂಡೊ ಹೇಳಿದ್ದಾರೆ.