ಗಾಝಾದಲ್ಲಿ ಹಮಾಸ್ ಹೊಂಚು ದಾಳಿ: ಇಸ್ರೇಲ್ ನ 10 ಯೋಧರು ಮೃತ್ಯು
ಗಾಝಾ: ಗಾಝಾದಲ್ಲಿ ಹಮಾಸ್ ನಡೆಸಿದ ಮಾರಣಾಂತಿಕ ಹೊಂಚುದಾಳಿಯಲ್ಲಿ ಇಸ್ರೇಲಿನ 10 ಯೋಧರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಶಿಜೈಯಾಹ್ ಪ್ರದೇಶದಲ್ಲಿ ಕಟ್ಟಡಗಳ ಸಮೂಹದಲ್ಲಿ ಹಮಾಸ್ ಸದಸ್ಯರಿಗಾಗಿ ಇಸ್ರೇಲ್ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಹಮಾಸ್ ಪಡೆ ಸ್ಫೋಟಕ ಎಸೆದು ಗುಂಡಿನ ದಾಳಿ ನಡೆಸಿದ್ದು ಹಿರಿಯ ಅಧಿಕಾರಿ ಕರ್ನಲ್ ಇಝಾಕ್ ಬೆನ್ಬಸಾತ್ ಸೇರಿದಂತೆ 9 ಇಸ್ರೇಲ್ ಯೋಧರು ಸಾವನ್ನಪ್ಪಿದ್ದಾರೆ. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಹಮಾಸ್ ದಾಳಿಗೆ ಓರ್ವ ಇಸ್ರೇಲ್ ಯೋಧ ಮೃತಪಟ್ಟಿದ್ದಾನೆ. ಇದರೊಂದಿಗೆ ಈಗ ನಡೆಯುತ್ತಿರುವ ಸಂಘರ್ಷದಲ್ಲಿ ಮೃತಪಟ್ಟ ಇಸ್ರೇಲ್ ಯೋಧರ ಸಂಖ್ಯೆ 115ಕ್ಕೇರಿದೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ಅಂತರಾಷ್ಟ್ರೀಯ ಟೀಕೆಗಳ ಹೊರತಾಗಿಯೂ ಗಾಝಾದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಇಸ್ರೇಲ್ ಘೋಷಿಸಿದೆ. ಯುದ್ಧ ಅಂತ್ಯಗೊಳಿಸುವವರೆಗೆ, ಗೆಲುವು ಸಾಧಿಸುವವರೆಗೆ ನಾವು ವಿರಮಿಸುವುದಿಲ್ಲ, ಇದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.