ಇಸ್ರೇಲ್ ಮೇಲೆ ಕ್ಷಿಪಣಿಗಳ ಸುರಿಮಳೆಗೈದ ಹಿಜ್ಬುಲ್ಲಾ; ಟೆಲ್ ಅವಿವ್ ನಲ್ಲಿ ತೀವ್ರ ಹಾನಿ
ಟೆಲ್ ಅವಿವ್: ಬೈರುತ್ ಮೇಲೆ ಇಸ್ರೇಲ್ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಹಿಜ್ಬುಲ್ಲಾ 340 ಕ್ಷಿಪಣಿಗಳು ಮತ್ತು ಡ್ರೋನ್ ಗಳ ಮೂಲಕ ದಾಳಿ ಮಾಡಿದ್ದು, ಟೆಲ್ ಅವಿವ್ ನಲ್ಲಿ ತೀವ್ರ ಹಾನಿ ಉಂಟುಮಾಡಿದೆ ಎಂದು AL JAZEERA ವರದಿ ಮಾಡಿದೆ.
ಇಸ್ರೇಲ್ ಸೈನ್ಯದ ರೇಡಿಯೊ ಪ್ರಕಾರ, ಹಿಜ್ಬುಲ್ಲಾ ಇಸ್ರೇಲ್ ಮೇಲೆ 340 ಕ್ಷಿಪಣಿಗಳು ಮತ್ತು ಡ್ರೋನ್ ಗಳ ಮೂಲಕ ದಾಳಿ ನಡೆಸಿದೆ. ಟೆಲ್ ಅವಿವ್ ನಲ್ಲಿ ದಾಳಿಯು ತೀವ್ರ ಹಾನಿಯನ್ನುಂಟುಮಾಡಿದ್ದು,11 ಜನರು ಗಾಯಗೊಂಡಿದ್ದಾರೆ.
ಹಿಜ್ಬುಲ್ಲಾ ದಾಳಿಯಿಂದ ಉತ್ತರ ಮತ್ತು ಮಧ್ಯ ಇಸ್ರೇಲ್ನಲ್ಲಿ ಹಲವರು ಗಾಯಗೊಂಡಿದ್ದಾರೆ ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ(IDF) ಈ ಕುರಿತು ಪ್ರತಿಕ್ರಿಯಿಸಿದ್ದು, ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. ಟೆಲ್ ಅವೀವ್ ಬಳಿಯ ಪೆಟಾಹ್ ಟಿಕ್ವಾ, ಹೈಫಾ, ನಹರಿಯಾ ಮೇಲೆ ರಾಕೆಟ್ ದಾಳಿ ನಡೆದಿದೆ ಎಂದು ತಿಳಿಸಿದೆ.
ಲೆಬನಾನಿನ ರಾಜಧಾನಿ ಬೈರುತ್ ಮೇಲೆ ಇಸ್ರೇಲ್ ನ ವೈಮಾನಿಕ ದಾಳಿಯು ಮುಂದುವರಿದಿದೆ. ಲೆಬನಾನ್ ಶಿಕ್ಷಣ ಸಚಿವಾಲಯವು ಬೈರುತ್ನಲ್ಲಿ ಜನವರಿಯವರೆಗೆ ಶಾಲೆಗಳನ್ನು ಮುಚ್ಚುವಂತೆ ಘೋಷಿಸಿದೆ. ಬೈರುತ್ ಮೇಲೆ ಶನಿವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ದಾಳಿಯಲ್ಲಿ 34 ನಾಗರಿಕರು ಮೃತಪಟ್ಟಿದ್ದರು.