ಪಾಕಿಸ್ತಾನ | ಇಮ್ರಾನ್ ಪಕ್ಷದ ಪ್ರತಿಭಟನೆ ; ಇಸ್ಲಾಮಾಬಾದ್ ನಲ್ಲಿ ಲಾಕ್‍ಡೌನ್, ಇಂಟರ್ ನೆಟ್ ಸ್ಥಗಿತ
ಇಸ್ಲಾಮಾಬಾದ್ : ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಿರಿ ಎಂಬ ಘೋಷಣೆಯೊಂದಿಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿಗರು ರವಿವಾರ ಇಸ್ಲಾಮಾಬಾದ್ ನಲ್ಲಿ ಪ್ರತಿಭಟನಾ ಜಾಥಾ ಆಯೋಜಿಸಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು ಲಾಕ್‍ಡೌನ್ ಜಾರಿಗೊಳಿಸಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಾರ್ಟಿ(ಪಿಟಿಐ) ಪಕ್ಷದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿತ್ತು. ಇಸ್ಲಾಮಾಬಾದ್ ನ ಕೆಲವೆಡೆ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಪೇಷಾವರದಿಂದ ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿ ಮತ್ತು ಖೈಬರ್ ಪಖ್ತೂಂಕ್ವಾದ ಮುಖ್ಯಮಂತ್ರಿ ಆಲಿ ಅಮೀನ್ ಗಂದಪುರ್ ನೇತೃತ್ವದಲ್ಲಿ ಪಿಟಿಐ ಕಾರ್ಯಕರ್ತರ ಜಾಥಾ ಇಸ್ಲಾಮಾಬಾದ್ ನತ್ತ ತೆರಳಿತ್ತು. ನಗರದ ವಿವಿಧ ಭಾಗಗಳಿಂದ ಇಸ್ಲಾಮಾಬಾದ್ ನತ್ತ ಕಾರ್ಯಕರ್ತರ ಹಲವು ತಂಡಗಳು ಜಾಥಾದಲ್ಲಿ ತೆರಳುತ್ತಿರುವ ವೀಡಿಯೊವನ್ನು ಪಿಟಿಐ ಪಕ್ಷ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದೆ. ಇಸ್ಲಾಮಾಬಾದ್ ನಗರಕ್ಕೆ ಯಾರಿಗೂ ಪ್ರವೇಶಿಸಲು ಪೊಲೀಸರು ಅವಕಾಶ ನೀಡಿಲ್ಲ. ರಾವಲ್ಪಿಂಡಿಯಿಂದ ಜಾಥಾದಲ್ಲಿ ಆಗಮಿಸಿದ 16 ಪಿಟಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. ಭಾರೀ ಭದ್ರತಾ ಪಡೆಗಳ ನಿಯೋಜನೆ, ಪ್ರಮುಖ ರಸ್ತೆಗಳನ್ನು ಮುಚ್ಚುವುದು ಮತ್ತು ರಾಜಧಾನಿಯ ಸುತ್ತಲೂ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಪ್ರತಿಭಟನೆಯನ್ನು ತಡೆಯಲು ಫೆಡರಲ್ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಲಾಹೋರ್, ರಾವಲ್ಪಿಂಡಿ ಮತ್ತು ಪೇಷಾವರ ನಡುವಿನ ಎಲ್ಲಾ ರೈಲು ಸೇವೆಗಳನ್ನೂ ಸ್ಥಗಿತಗೊಳಿಸಲಾಗಿತ್ತು. ಇಸ್ಲಾಮಾಬಾದ್, ಫೈಝಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮೆಟ್ರೋ ಬಸ್ ಸೇವೆ ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನೂ ಬಂದ್ ಮಾಡಲಾಗಿದೆ. ಇಸ್ಲಾಮಾಬಾದ್ ನಲ್ಲಿ ನವೆಂಬರ್ 18ರಿಂದ ಸೆಕ್ಷನ್ 144 ಜಾರಿಯಲ್ಲಿದ್ದರೆ, ಪಂಜಾಬ್ ಪ್ರಾಂತದಾದ್ಯಂತ ನವೆಂಬರ್ 23ರಿಂದ 25ರವರೆಗೆ ಸೆಕ್ಷನ್ 144 ಜಾರಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನಲ್' ವರದಿ ಮಾಡಿದೆ.
ಕಳೆದ ವರ್ಷದಿಂದ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಪ್ರತಿಭಟನೆಗೆ ಜನಸಾಮಾನ್ಯರು ಒಟ್ಟುಗೂಡಬೇಕೆಂದು ಒತ್ತಾಯಿಸಿದ್ದು ಇದು ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಚಳವಳಿ ಎಂದಿದ್ದಾರೆ.