ಹವಾಮಾನ ನಿಧಿಗೆ 300 ಶತಕೋಟಿ ಡಾಲರ್ | ಸಿಒಪಿ29 ಶೃಂಗಸಭೆಯಲ್ಲಿ ಒಪ್ಪಂದ ಅಂಗೀಕಾರ ; ಭಾರತ ಸೇರಿ ಅಭಿವೃದ್ಧಿಶೀಲ ರಾಷ್ಟ್ರಗಳ ವಿರೋಧ

Update: 2024-11-24 15:38 GMT

ಮುಖ್ತಾರ್ ಬಾಬಾಯೆವ್, COP29 ಅಧ್ಯಕ್ಷ,  ಮತ್ತು ವಿಶ್ವಸಂಸ್ಥೆಯ ಹವಾಮಾನ ಮುಖ್ಯಸ್ಥ ಸೈಮನ್ ಸ್ಟೀಲ್ | PC : PTI

ಬಾಕು : ಅಝರ್‍ಬೈಜಾನ್‌ ನ ಬಾಕು ನಗರದಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆದ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆಯ ವಿರುದ್ಧದ ಮಾನವನ ಹೋರಾಟಕ್ಕೆ ವಾರ್ಷಿಕ 300 ಶತಕೋಟಿ ಡಾಲರ್ ಮೊತ್ತದ ನಿಧಿ ಸಂಗ್ರಹಿಸುವ ಒಪ್ಪಂದವನ್ನು ಅಂಗೀಕರಿಸಲಾಗಿದೆ.

ಆದರೆ ಭಾರತ ಸೇರಿದಂತೆ ಹಲವು ಅಭಿವೃದ್ಧಿಶೀಲ ದೇಶಗಳು ಈ ಒಪ್ಪಂದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. 300 ಶತಕೋಟಿ ಡಾಲರ್ ಹಣವು ಭೂಗೋಳದ ತಾಪಮಾನ ಹೆಚ್ಚಲು ಕಾರಣವಾಗುವ ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ತೊಡೆದುಹಾಕಲು ಹಣದ ಅಗತ್ಯವಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಗುತ್ತದೆ. ಭವಿಷ್ಯದ ತಾಪಮಾನಕ್ಕೆ ಹೊಂದಿಕೊಳ್ಳುವ ವೆಚ್ಚ ಮತ್ತು ಹವಾಮಾನ ಬದಲಾವಣೆಯ ತೀವ್ರ ತಾಪಮಾನದಿಂದ ಉಂಟಾದ ಹಾನಿಯನ್ನು ಈ ನಿಧಿಯಿಂದ ಪಾವತಿಸಲಾಗುತ್ತದೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳು ಆಗ್ರಹಿಸಿರುವ 1.3 ಲಕ್ಷ ಕೋಟಿ ಡಾಲರ್ ನಿಧಿಗಿಂತ ಇದು ತುಂಬಾ ಕಡಿಮೆಯಾಗಿದೆ.

2009ರಲ್ಲಿ ಅಂಗೀಕರಿಸಿದ್ದ ಪ್ರತೀ ವರ್ಷ 100 ಶತಕೋಟಿ ಡಾಲರ್ ನಿಧಿಗೆ ಹೋಲಿಸಿದರೆ ಈ ಪ್ರಮಾಣ ದುಪ್ಪಟ್ಟಾಗಿದೆ ಎಂದು ಶ್ರೀಮಂತ ರಾಷ್ಟ್ರಗಳು ಪ್ರತಿಪಾದಿಸಿದ್ದು ಒಪ್ಪಂದವು ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ಹಣ ನಿಧಿಗೆ ಸೇರ್ಪಡೆಗೊಳ್ಳುವ ವಿಶ್ವಾಸವಿರುವುದಾಗಿ ಹೇಳಿವೆ. ಆದರೆ ಒಪ್ಪಂದದ ಬಗ್ಗೆ ಎಲ್ಲಾ ಸದಸ್ಯರು ಸಹಮತ ಸೂಚಿಸಲಿಲ್ಲ. ಯಾವುದೇ ದೇಶಗಳು ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ದೊರಕುವುದಕ್ಕೂ ಮುನ್ನವೇ ಸಿಒಪಿ29 ಶೃಂಗಸಭೆಯ ಅಧ್ಯಕ್ಷ ಮುಖ್ತಾರ್ ಬಬಯೇವ್ ಒಪ್ಪಂದಕ್ಕೆ ಸಹಮತ ಸೂಚಿಸಿದರು ಎಂದು ವರದಿಯಾಗಿದೆ.

ಯುರೋಪಿಯನ್ ಯೂನಿಯನ್ ಪ್ರತಿನಿಧಿ ವೋಪ್ಕೆ ಹೊಕೆಸ್ಟ್ರಾ ಒಪ್ಪಂದವನ್ನು ಶ್ಲಾಘಿಸಿದ್ದು ಇದು ಹವಾಮಾನ ನಿಧಿಗೆ ಸಂಬಂಧಿಸಿದ ಹೊಸ ಯುಗವನ್ನು ಸೂಚಿಸಿದ್ದು ಅತ್ಯಂತ ದುರ್ಬಲ ದೇಶಗಳಿಗೆ ನೆರವಾಗುತ್ತದೆ ಎಂದಿದ್ದಾರೆ. ಒಪ್ಪಂದದಿಂದ ತುಂಬಾ ನಿರಾಳವಾಗಿದೆ. ಭಿನ್ನಾಭಿಪ್ರಾಯ, ವಿಭಜನೆ, ಯುದ್ಧದ ಈ ಸಮಯದಲ್ಲಿ ಬಹುಪಕ್ಷೀಯ ವ್ಯವಸ್ಥೆಯು ನಿಜವಾದ ತೊಂದರೆಯಲ್ಲಿದೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ ಒಪ್ಪಂದ ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ ಎಂದು ಐರ್‍ಲ್ಯಾಂಡ್‍ನ ಪರಿಸರ ಸಚಿವ ಎಮಾನ್ ರಿಯಾನ್ ಹೇಳಿದ್ದಾರೆ.

ಒಪ್ಪಂದವು `ಮಾನವೀಯತೆಯ ವಿಮಾ ಪಾಲಿಸಿ' ಎಂದು ಬಣ್ಣಿಸಿರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ವಿಭಾಗದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್ ಸ್ಟಿಯೆಲ್, ` ವಿಮಾ ಪಾಲಿಸಿಯ ರೀತಿಯಲ್ಲಿ ಇದು ಸರಿಯಾದ ಸಮಯದಲ್ಲಿ ಮತ್ತು ಪೂರ್ಣ ಪ್ರಮಾಣದಲ್ಲಿ ಪ್ರೀಮಿಯಂ ಪಾವತಿಸಿದರೆ ಮಾತ್ರ ಕಾರ್ಯ ನಿರ್ವಹಿಸಲಿದೆ' ಎಂದು ಹೇಳಿದ್ದಾರೆ.

ಮುಂದಿನ ವರ್ಷದ ಆರಂಭಕ್ಕೆ ನಿಗದಿಯಾಗಿರುವ, ಇಂಗಾಲ ಹೊರಸೂಸುವಿಕೆ ಮಿತಿಯನ್ನು ಇನ್ನಷ್ಟು ಕಡಿತಗೊಳಿಸುವ ಮಹಾತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಲು ದುರ್ಬಲ ದೇಶಗಳಿಗೆ ಸಹಾಯ ಮಾಡುವತ್ತ ಈ ಒಪ್ಪಂದವು ಒಂದು ಪ್ರಮುಖ ಹೆಜ್ಜೆಯಾಗಿದೆ. ಮತ್ತು ಪ್ರತೀ 5 ವರ್ಷಗಳಿಗೊಮ್ಮೆ ಹೊಸ ಗುರಿಗಳೊಂದಿಗೆ ಮಾಲಿನ್ಯವನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿದೆ.

 ಹವಾಮಾನ ಒಪ್ಪಂದಕ್ಕೆ ಭಾರತದ ತಿರಸ್ಕಾರ  

 ಅಝರ್‍ಬೈಜಾನ್‌ ನ ಬಾಕು ನಗರದಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆದ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 300 ಶತಕೋಟಿ ಡಾಲರ್ ಆರ್ಥಿಕ ನೆರವಿನ ಒಪ್ಪಂದವನ್ನು ತಿರಸ್ಕರಿಸುವುದಾಗಿ ಭಾರತ ಹೇಳಿದೆ.

ಇದು ಪೂರ್ವ ನಿಯೋಜಿತ ಪ್ರಕ್ರಿಯೆ ಮತ್ತು ಪಾಶ್ಚಿಮಾತ್ಯರ ಅಜೆಂಡಾವಾಗಿದೆ. ನಾವಿದನ್ನು ಒಪ್ಪುವುದಿಲ್ಲ. ವಿಶ್ವಸಂಸ್ಥೆ ವ್ಯವಸ್ಥೆಯಲ್ಲಿ ನಾವು ವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಶೃಂಗಸಭೆಯಲ್ಲಿ ಭಾರತದ ನಿಯೋಗದ ಪ್ರತಿನಿಧಿ ಚಾಂದಿನಿ ರೈನಾ ಟೀಕಿಸಿದ್ದಾರೆ.

ತುಂಬಾ ತಡವಾಗಿ ಬಂದಿರುವ ಅತ್ಯಲ್ಪ ನಿಧಿ ಇದಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮ ಹೊಣೆಗಾರಿಕೆಯನ್ನು ಪೂರ್ಣಗೊಳಿಸಲು ಇಚ್ಚೆಯಿಲ್ಲ ಎಂಬುದನ್ನು ಇದು ತೋರಿಸಿದೆ. ಒಪ್ಪಂದ ಅಂಗೀಕಾರಕ್ಕೂ ಮುನ್ನ ಮಾತನಾಡಲು ನಮ್ಮ ನಿಯೋಗಕ್ಕೆ ಅವಕಾಶ ನೀಡಿಲ್ಲ. ಇದು ನಮ್ಮ ಅಭಿಪ್ರಾಯವಲ್ಲ. ನಾವು ಎದುರಿಸುತ್ತಿರುವ ಸವಾಲಿನ ಅಗಾಧತೆಯ ಬಗ್ಗೆ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ. ಆದ್ದರಿಂದ ಈ ಒಪ್ಪಂದದ ಅಂಗೀಕಾರಕ್ಕೆ ನಮ್ಮ ವಿರೋಧವಿದೆ. 300 ಶತಕೋಟಿ ಡಾಲರ್ ನಿಧಿಯು ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯ ಮತ್ತು ಆದ್ಯತೆಯ ಬಗ್ಗೆ ಗಮನ ನೀಡಿಲ್ಲ. ಸಿಬಿಡಿಆರ್(ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು), ಸಮಾನತೆಯ ತತ್ವಗಳಿಗೆ ಇದು ವಿರುದ್ಧವಾಗಿದೆ ಎಂದವರು ಹೇಳಿದ್ದಾರೆ.

ನೈಜೀರಿಯಾ, ಪನಾಮಾ, ಮಲಾವಿ, ಬೊಲಿವಿಯಾ ಮುಂತಾದ ಹಲವು ದೇಶಗಳೂ ಭಾರತದ ನಿಲುವನ್ನು ಬೆಂಬಲಿಸಿವೆ. 

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News