ಒತ್ತೆಯಾಳುಗಳ ಬಿಡುಗಡೆಗಾಗಿನ ಈಜಿಪ್ಟ್-ಹಮಾಸ್ ಮಾತುಕತೆ ವಿಫಲ
ಜೆರುಸಲೇಂ: ಗಾಝಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಹಮಾಸ್ ಜೊತೆ ಈಜಿಪ್ಟ್ ನಡೆಸಿದ ಮಾತುಕತೆಯು ಯಾವುದೇ ಫಲಿತಾಂಶಗಳಿಲ್ಲದೆ ಕೊನೆಗೊಂಡಿದ್ದು, ಒತ್ತೆಯಾಳುಗಳ ವಿನಿಮಯದ ಸಾಧ್ಯತೆಯು ಇದೀಗ ಅಸ್ಪಷ್ಟವಾಗಿದೆ.
ಗಾಝಾದಲ್ಲಿ ಇಸ್ರೇಲ್ ನ ಆಕ್ರಮಣವನ್ನು ಸಂಪೂರ್ಣವಾಗಿ ಕೊನೆಗೊಳಿಸುವುದಕ್ಕಿಂತ ಕಡಿಮೆಯದ್ದಾದ ಯಾವುದೇ ಒಪ್ಪಂದದ ಬಗ್ಗೆಯೂ ತಾನು ಚರ್ಚೆಗೆ ಸಿದ್ಧನಿಲ್ಲವೆಂದು ಹಮಾಸ್ ಹೇಳಿದೆ. ಇದರೊಂದಿಗೆ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಇನ್ನೂ ಅನಿಶ್ಚಿತಗೊಂಡಂತಾಗಿದೆ.
ಈಜಿಪ್ಟ್ ನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಒಂದು ತಿಂಗಳಿಗೂ ಅಧಿಕ ಸಮಯದ ಬಳಿಕ ಇದೇ ಮೊದಲ ಬಾರಿಗೆ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯೆಹ್ ಈಜಿಪ್ಟ್ ಗೆ ಭೇಟಿ ನೀಡಿದ್ದರೆಂದು ವರದಿ ತಿಳಿಸಿದೆ.
ಗಾಝಾದಲ್ಲಿ ಹಮಾಸ್ನ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಾಗೂ ಇದಕ್ಕೆ ಪ್ರತಿಯಾಗಿ ಇಸ್ರೇಲ್ ನ ಬಂಧನದಲ್ಲಿರುವ ಫೆಲೆಸ್ತೀನಿ ಕೈದಿಗಳನ್ನು ಮರಳಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಮೊದಲಿಗೆ ಗಾಝಾದ ಮೇಲಿನ ಸೇನಾ ಆಕ್ರಮಣವನ್ನು ಇಸ್ರೇಲ್ ಕೊನೆಗೊಳಿಸಬೇಕೆಂದು ಹಮಾಸ್ ಪಟ್ಟು ಹಿಡಿದಿರುವುದರಿಂದ ಮಾತುಕತೆ ಫಲಪ್ರದವಾಗಲಿಲ್ಲವೆಂದು ಫೆಲೆಸ್ತೀನ್ ಅಧಿಕಾರಿಯೊಬ್ಬರು ಬಿಬಿಸಿಗೆ ತಿಳಿಸಿದ್ದಾರೆ.
ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರಿಸುವ ತನಕ ನಾವು ಸಂಧಾನಗಳನ್ನು ನಡೆಸಲು ಬಯಸುವುದಿಲ್ಲ. ಆಕ್ರಮಣವು ಕೊನೆಗೊಂಡ ಆನಂತರವಷ್ಟೇ ಕೈದಿಗಳಿಗೆ ಸಂಬಂಂಧಿಸಿದ ಯಾವುದೇ ಪ್ರಸ್ತಾವನೆಯ ಬಗ್ಗೆ ಚರ್ಚೆಯಾಗಬೇಕೆಂದು ಹಮಾಸ್ ಪ್ರತಿಪಾದಿಸುತ್ತಿದೆ ಎಂದು ಹಾನಿಯೆಹ್ ಅವರ ಮಾಧ್ಯಮ ಸಲಹೆಗಾರ ತಾಹಿರ್ ಅಲ್ ನೊನೊ ಹೇಳಿದ್ದಾರೆ.