ಗಾಝಾ | ಇಸ್ರೇಲ್ ದಾಳಿಯಲ್ಲಿ 14 ಮಂದಿ ಮೃತ್ಯು
ಗಾಝಾ : ಗಾಝಾ ಪಟ್ಟಿಯ ಉತ್ತರ ಮತ್ತು ಮಧ್ಯ ಪ್ರಾಂತಗಳನ್ನು ಗುರಿಯಾಗಿಸಿ ಇಸ್ರೇಲ್‍ನ ಟ್ಯಾಂಕ್ ಹಾಗೂ ವೈಮಾನಿಕ ದಾಳಿಯಲ್ಲಿ ಕನಿಷ್ಟ 14 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಇಸ್ರೇಲ್‍ನ ಟ್ಯಾಂಕ್‍ಗಳು ಈಜಿಪ್ಟ್ ಗಡಿಯ ಬಳಿ ವಾಯವ್ಯ ರಫಾದತ್ತ ಮತ್ತಷ್ಟು ಮುಂದುವರಿದಿರುವುದಾಗಿ ಗಾಝಾದ ಆರೋಗ್ಯಾಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಗಾಝಾದ ನುಸೀರಾತ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಟ್ಯಾಂಕ್‍ಗಳ ಶೆಲ್‍ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು ಇತರ 7 ಮಂದಿ ಗಾಯಗೊಂಡಿದ್ದಾರೆ. ಗಾಝಾ ನಗರದ ಮನೆಯೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇತರ 6 ಮಂದಿ ಹತರಾಗಿದ್ದಾರೆ. ಉತ್ತರದ ಬೀತ್ ಹನೌನ್ ಪಟ್ಟಣದಲ್ಲಿ ಕಾರಿನ ಮೇಲೆ ನಡೆದ ದಾಳಿಯಲ್ಲಿ ಹಲವು ಸಾವು-ನೋವು ಸಂಭವಿಸಿದೆ.
ದಕ್ಷಿಣದ ರಫಾ ನಗರದಲ್ಲಿ ಯುದ್ಧವಿಮಾನಗಳ ಬೆಂಬಲದಿಂದ ಇಸ್ರೇಲ್ ಟ್ಯಾಂಕ್‍ಗಳು ಮುನ್ನಡೆ ಸಾಧಿಸಿವೆ. ರಫಾದ ಪೂರ್ವ ಪ್ರಾಂತದಲ್ಲಿ ಭಾರೀ ಸ್ಫೋಟ ಮತ್ತು ಗುಂಡಿನ ಶಬ್ದ ಕೇಳಿಬಂದಿದ್ದು ಇಸ್ರೇಲ್ ಸೇನೆ ಹಲವು ಮನೆಗಳನ್ನು ಸ್ಫೋಟಿಸಿದೆ ಎಂದು ವರದಿಯಾಗಿದೆ. ಆಕ್ರಮಿತ ಪಶ್ಚಿಮದಂಡೆಯ ಖಬಾಟಿಯಾ ನಗರದಲ್ಲಿ ಇಸ್ರೇಲ್ ಪಡೆಗಳ ಕಾರ್ಯಾಚರಣೆಯಲ್ಲಿ 6 ಫೆಲೆಸ್ತೀನೀಯರು ಹತರಾಗಿದ್ದು ಇತರ 18 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಖಬಾತಿಯಾ ನಗರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಇಸ್ರೇಲ್ ಪಡೆ ಈ ಪ್ರದೇಶದಲ್ಲಿನ ಮೂಲಸೌಕರ್ಯಗಳನ್ನು ನಾಶಗೊಳಿಸಿದ ಬಳಿಕ ಹಿಂದಕ್ಕೆ ಸರಿದಿದೆ. ಗಾಯಗೊಂಡವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಗವರ್ನರ್ ರನ್ನು ಉಲ್ಲೇಖಿಸಿದ ವರದಿ ಹೇಳಿದೆ.