ವೈಮಾನಿಕ ದಾಳಿಯಲ್ಲಿ ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲ್
ಟೆಲ್ ಅವೀವ್: ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಗುರುವಾರ ರಾತ್ರಿ ಗಾಝಾಪಟ್ಟಿಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‍ನ ವೆಸ್ಟರ್ನ್ ಖಾನ್‍ಯೂನಿಸ್ ತುಕಡಿಯ ಕಮಾಂಡರ್ ಮಧತ್ ಮುಬ್‍ಷರ್ ರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಸತತ ಎರಡನೇ ದಿನ ಮುಂದುವರಿದ ವೈಮಾನಿಕ ದಾಳಿಯಲ್ಲಿ ಗಾಝಾದಲ್ಲಿನ ಭೂಗತ ಸುರಂಗ ನೆಟ್‍ವರ್ಕ್ ಸೇರಿದಂತೆ ಹಮಾಸ್‍ನ 250 ನೆಲೆಗಳಿಗೆ ಹಾನಿಯಾಗಿದೆ. ಐಡಿಎಫ್ ಪಡೆ ಹಾಗೂ ಇಸ್ರೇಲಿ ವಸಾಹತುಗಳ ವಿರುದ್ಧ ಹೊಂಚು ದಾಳಿ ಹಾಗೂ ಸ್ಫೋಟ ಕೃತ್ಯಗಳಲ್ಲಿ ಮಧತ್ ಪಾತ್ರವಿತ್ತು. ಹಮಾಸ್‍ನ ಸುರಂಗ ನೆಲೆ, ಕಮಾಂಡ್ ಕೇಂದ್ರಗಳು, ರಾಕೆಟ್ ಲಾಂಚರ್ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಹಮಾಸ್‍ಗೆ ಭಾರೀ ನಷ್ಟವಾಗಿದೆ ಎಂದು ಇಸ್ರೇಲ್ ಹೇಳಿದೆ.
ಈ ಮಧ್ಯೆ, ಜೆನಿನ್ ನಿರಾಶ್ರಿತರ ಶಿಬಿರದ ಬಳಿ ಗುರುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಹಮಾಸ್‍ನ ಜೆನಿನ್ ಘಟಕದ ಫೀಲ್ಡ್ ಕಮಾಂಡರ್ ಅಯ್ಸರ್ ಮುಹಮ್ಮದ್ ಅಲ್-ಅಮಿರ್ ಮೃತಪಟ್ಟಿರುವುದಾಗಿ ಐಡಿಎಫ್ ಹೇಳಿಕೆ ನೀಡಿದೆ. ಶಿಬಿರದ ಸ್ಥಳದಲ್ಲಿ ಫೆಲೆಸ್ತೀನೀಯರು ಇಸ್ರೇಲ್ ಪಡೆಯತ್ತ ಸ್ಫೋಟಕ ವಸ್ತುಗಳನ್ನು ಎಸೆದಾಗ ಇಸ್ರೇಲ್ ಸೇನೆ ಪ್ರತ್ಯುತ್ತರ ನೀಡಿದೆ ಎಂದು ಹೇಳಿಕೆ ತಿಳಿಸಿದೆ.