ತಾತ್ಕಾಲಿಕ ಕದನ ವಿರಾಮ: ಮತ್ತೆ 17 ಒತ್ತೆಯಾಳು ಬಿಡುಗಡೆ ಮಾಡಿದ ಹಮಾಸ್
ಗಾಜಾ: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆದ ಕದನ ವಿರಾಮ ಒಪ್ಪಂದದ ಅನ್ವಯ ಅಕ್ಟೋಬರ್ 7ರ ದಾಳಿ ಸಂದರ್ಭ ಒತ್ತೆಯಾಳುಗಳಾಗಿ ಸೆರೆಹಿಡಿದಿದ್ದ 17 ಮಂದಿಯ ಎರಡನೇ ಗುಂಪನ್ನು ಹಮಾಸ್ ಶನಿವಾರ ಬಿಡುಗಡೆ ಮಾಡಿದೆ. ಫೆಲೆಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಒಂದು ಗಂಟೆ ವಿಳಂಬವಾಗಿ ಹಮಾಸ್ ಒಟ್ಟು 17 ಮಂದಿಯನ್ನು ಬಿಡುಗಡೆ ಮಾಡಿದೆ.
ಇದರಲ್ಲಿ 13 ಮಂದಿ ಇಸ್ರೇಲಿಗಳು ಹಾಗೂ ನಾಲ್ವರು ಥಾಯ್ಲೆಂಡ್ ಪ್ರಜೆಗಳು ಸೇರಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ಸೇನೆ ಮತ್ತು ಶಿನ್ ಬೆಟ್ ಸೆಕ್ಯುರಿಟಿ ಸರ್ವೀಸ್ ಈ ಬಗ್ಗೆ ಜಂಟಿ ಹೇಳಿಕೆ ನೀಡಿವೆ.
13 ಮಂದಿ ಇಸ್ರೇಲಿಗಳು ಹಾಗೂ ಏಳು ಮಂದಿ ವಿದೇಶಿಯರನ್ನು ರೆಡ್ ಕ್ರಾಸ್ ಗೆ ಹಸ್ತಾಂತರಿಸಲಾಗಿದೆ ಎಂದು ಹಮಾಸ್ ಈ ಮುನ್ನ ಪ್ರಕಟಿಸಿತ್ತು. ಎರಡೂ ಬಣಗಳ ಹೇಳಿಕೆಯಲ್ಲಿ ಈ ವ್ಯತ್ಯಾಸ ಏಕಾಗಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇಸ್ರೇಲ್ ಈ ವಿನಿಮಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಹಮಾಸ್ ಆಪಾದಿಸಿ, ಒತ್ತೆಯಾಳು ಬಿಡುಗಡೆಯನ್ನು ವಿಳಂಬ ಮಾಡಿತ್ತು. ಆದರೆ ಇಸ್ರೇಲ್ ಅಧಿಕಾರಿಗಳು ಈ ವಾದವನ್ನು ಅಲ್ಲಗಳೆದಿದ್ದಾರೆ.
ಈ ಅನಿರೀಕ್ಷಿತ ವಿಳಂಬದಿಂದಾಗಿ ಕತಾರ್ ಹಾಗೂ ಈಜಿಪ್ಟ್ ಮಧ್ಯಸ್ಥಿಕೆದಾರರಿಗೆ ಆತಂಕ ಉಂಟಾಗಿತ್ತು. ಬಿಡುಗಡೆಯಾಗಬೇಕಿರುವ ಕೈದಿಗಳ ಆಯ್ಕೆಯಲ್ಲಿ ಇಸ್ರೇಲ್ ಹಸ್ತಕ್ಷೇಪ ಮಾಡುತ್ತಿದೆ ಹಾಗೂ ಉತ್ತರ ಗಾಝಾದಲ್ಲಿ ವೈದ್ಯಕೀಯ ನೆರವು ಒದಗಿಸಲು ಇಸ್ರೇಲ್ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.