ಹಮಾಸ್ ನಾಶವಾಗುವವರೆಗೆ ವಿಶ್ರಮಿಸುವುದಿಲ್ಲ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಘೋಷಣೆ

Update: 2023-10-27 16:47 GMT

Photo : PTI 

ವಿಶ್ವಸಂಸ್ಥೆ: ಬಾಂಬ್ ದಾಳಿ ನಿಲ್ಲಿಸಿ ಮತ್ತು ಜೀವಗಳನ್ನು ಉಳಿಸಿ ಎಂದು ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನಿಯನ್ ರಾಯಭಾರಿ ಮನವಿ ಮಾಡಿದರೆ, ಹಮಾಸ್ ನಾಶವಾಗುವವರೆಗೆ ನಾವು ವಿಶ್ರಮಿಸುವುದಿಲ್ಲ ಎಂದು ಇಸ್ರೇಲ್ ರಾಯಭಾರಿ ಘೋಷಿಸಿದ್ದಾರೆ.

ಗಾಝಾದಲ್ಲಿನ ಯುದ್ಧದ ಕುರಿತು ಗುರುವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 193 ಸದಸ್ಯ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡರು. ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೆ ಆಗ್ರಹಿಸುವ ಒಮ್ಮತದ ನಿರ್ಣಯ ಅಂಗೀಕರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ವಿಫಲವಾದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಅರಬ್ ರಾಷ್ಟ್ರಗಳು ಈ ಕುರಿತ ನಿರ್ಣಯ ಮಂಡಿಸಲು ನಿರ್ಧರಿಸಿವೆ. ಗುರುವಾರ ನಡೆದ ತುರ್ತು ವಿಶೇಷ ಅಧಿವೇಶನದಲ್ಲಿ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್‍ರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರತಿನಿಧಿಗಳೂ ಅರಬ್ ರಾಷ್ಟ್ರಗಳ ನಿರ್ಣಯವನ್ನು ಬೆಂಬಲಿಸುವುದಾಗಿ ಘೋಷಿಸಿವೆ. ಸಭೆಯಲ್ಲಿ ಮಾತನಾಡಿದ ಎರ್ಡನ್ `ಕದನ ವಿರಾಮವೆಂದರೆ ಹಮಾಸ್‍ಗೆ ಚೇತರಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಮತ್ತು ಅವರು ಮತ್ತೊಮ್ಮೆ ನಮ್ಮ ಹತ್ಯಾಕಾಂಡ ನಡೆಸಲಿದ್ದಾರೆ' ಎಂದರು.

ಕದನವಿರಾಮಕ್ಕೆ ಕರೆ ಎಂದರೆ ಅದು ಶಾಂತಿಗೆ ಪ್ರಯತ್ನ ಎಂದಲ್ಲ, ಅದು ಇಸ್ರೇಲ್‍ನ ಕೈಗಳನ್ನು ಕಟ್ಟಿಹಾಕುವ ಪ್ರಯತ್ನ ಮತ್ತು ನಮ್ಮ ನಾಗರಿಕರಿಗೆ ಎದುರಾಗಿರುವ ಭಾರೀ ಬೆದರಿಕೆಯನ್ನು ನಿವಾರಿಸುವುದಕ್ಕೆ ತಡೆಯಾಗಿದೆ. ಇಸ್ರೇಲ್‍ನ ಕಾರ್ಯಾಚರಣೆಗೂ ಅರಬ್-ಇಸ್ರೇಲಿ ಬಿಕ್ಕಟ್ಟಿಗೆ ಅಥವಾ ಫೆಲೆಸ್ತೀನಿಯನ್ ಪ್ರಶ್ನೆಗೆ ಯಾವುದೇ ಸಂಬಂಧವಿಲ್ಲ. ಇದು ಫೆಲೆಸ್ತೀನೀಯರ ಜತೆಗಿನ ಯುದ್ಧವಲ್ಲ ಎಂದು ಎರ್ಡನ್ ಪ್ರತಿಪಾದಿಸಿದರು.

ಸಭೆಯಲ್ಲಿ ಮಾತನಾಡಿದ ಇರಾನ್ ಪ್ರತಿನಿಧಿ ಹುಸೇನ್ ಅಮೀರಬ್ದುಲ್ಲಹಿಯಾನ್ `ಈ ಅತ್ಯಂತ ಅಗತ್ಯದ ಮಾನವೀಯ ಪ್ರಯತ್ನದಲ್ಲಿ ಖತರ್ ಮತ್ತು ಟರ್ಕಿ ಜತೆಗೆ ತನ್ನ ಪಾತ್ರವನ್ನು ನಿರ್ವಹಿಸಲು ಇರಾನ್ ಸಿದ್ಧವಿದೆ' ಎಂದರು. ಅಮೆರಿಕ ಈ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದೆ ಎಂದವರು ಆರೋಪಿಸಿದರು.

22 ದೇಶಗಳ ಅರಬ್ ಗುಂಪಿನ ಪರವಾಗಿ ಮಾತನಾಡಿದ ಜೋರ್ಡನ್‍ನ ವಿದೇಶಾಂಗ ಸಚಿವ ಅಯ್ಮಾನ್ ಸಫಾದಿ ` ಇಸ್ರೇಲ್‍ನ ಬಾಂಬ್‍ದಾಳಿಯಲ್ಲಿ ನೆಲಸಮಗೊಂಡ ಮನೆಗಳ ಅವಶೇಷಗಳಡಿ ಸಿಲುಕಿ ಮೃತಪಟ್ಟ ಮಕ್ಕಳು, ಇನ್ನೂ ಪ್ರಾಣವಿದ್ದರೂ ಹೊರ ಬರಲಾಗದೆ ಚಡಪಡಿಸುತ್ತಿರುವವರ ಸಂಕಟವನ್ನು ಜಗತ್ತು ಗಮನಿಸುತ್ತಿದೆ. ನಾವು ಮೃತಪಟ್ಟವರನ್ನೂ ಅತಿಯಾಗಿ ಗೌರವಿಸುತ್ತೇವೆ. ಈ ಯುದ್ಧದಲ್ಲಿ ಮೃತಪಟ್ಟ ಫೆಲೆಸ್ತೀನಿಯನ್ ಜನರ ಬಗ್ಗೆ ಇಸ್ರೇಲ್ ರಾಯಭಾರಿ ಒಂದು ಮಾತನ್ನೂ ಆಡದಿರುವುದು ವಿಷಾದನೀಯ. ಇದು ಮುಸ್ಲಿಮರು ಮತ್ತು ಯೆಹೂದಿಗಳ ನಡುವಿನ ಯುದ್ಧ ಎಂದು ಅವರು(ಇಸ್ರೇಲಿಯನ್ನರು) ಹೇಳಲು ಬಿಡಬೇಡಿ. ನಾವು ಮುಸ್ಲಿಮ್, ಕೈಸ್ತರು, ಯೆಹೂದಿಗಳು ಎಲ್ಲರ ಪ್ರಾಣವನ್ನೂ ಗೌರವಿಸುತ್ತೇವೆ. ನಾವು ಎಲ್ಲರ ಪ್ರಾಣವನ್ನೂ ಗೌರವಿಸುತ್ತೇವೆ. ಸ್ವ-ರಕ್ಷಣೆಯ ಹಕ್ಕು ಎಂದರೆ ನಿರ್ಭಯದಿಂದ ಕೊಲ್ಲುವ ಪರವಾನಿಗೆಯಲ್ಲ. ಇಸ್ರೇಲ್ ಅಂತರಾಷ್ಟ್ರೀಯ ಮಾನವೀಯ ಕಾನೂನಿಗಿಂತ ಮಿಗಿಲಲ್ಲ' ಎಂದರು.

ಅನಾಗರಿಕ ಕೃತ್ಯ: ಫೆಲೆಸ್ತೀನ್ ರಾಯಭಾರಿ

ಸಭೆಯಲ್ಲಿ ಮಾತನಾಡಿದ ಫೆಲೆಸ್ತೀನಿಯನ್ ರಾಯಭಾರಿ ರಿಯಾದ್ ಮನ್ಸೂರ್ `ಗಾಝಾದಲ್ಲಿ ಹತರಾದವರಲ್ಲಿ 70%ದಷ್ಟು ಮಕ್ಕಳು ಹಾಗೂ ಮಹಿಳೆಯರು. ಈ ಯುದ್ಧವನ್ನು ನೀವು ಸಮರ್ಥಿಸುತ್ತಿದ್ದೀರಾ? ಈ ಯುದ್ಧವನ್ನು ಸಮರ್ಥಿಸಲು ಸಾಧ್ಯವೇ ? ಇವು ಅಪರಾಧ ಕೃತ್ಯಗಳು. ಅನಾಗರಿಕ ಕೃತ್ಯಗಳು. ನಿಮ್ಮಿಂದ ಹತ್ಯೆಗೀಡಾದವರಿಗಾಗಿ ನೀವು ಇದನ್ನು ನಿಲ್ಲಿಸಲು ಸಿದ್ಧವಿಲ್ಲದಿದ್ದರೆ, ನಾವು ಇನ್ನೂ ಉಳಿಸಬಹುದಾದ ಜೀವಗಳಿಗಾಗಿ ಆದರೂ ಇದನ್ನು ನಿಲ್ಲಿಸಿ' ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News