ಮಂಗಳ ಗ್ರಹದಲ್ಲಿ ವಾಸಿಸಿದರೆ ಮಾನವರು ಹಸಿರು ಬಣ್ಣಕ್ಕೆ ತಿರುಗಬಹುದು: ವರದಿ
ನ್ಯೂಯಾರ್ಕ್ : ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವುದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಮೈಲಿಗಲ್ಲು ಎನಿಸಲಿದೆ. ಆದರೆ ಮಂಗಳನಲ್ಲಿಯ ಕ್ರೂರ ಪರಿಸ್ಥಿತಿಯಿಂದಾಗಿ ಮಂಗಳ ಗ್ರಹವನ್ನು ವಾಸಸ್ಥಾನವನ್ನಾಗಿ ಮಾಡುವ ಕನಸನ್ನು ಸಾಧಿಸುವುದು ಕಷ್ಟಕರವಾಗಲಿದೆ. ಮಂಗಳ ಗ್ರಹದಲ್ಲಿ ವಾಸಿಸಿದರೆ ಮಾನವರು ಹಸಿರು ಬಣ್ಣಕ್ಕೆ ತಿರುಗಬಹುದು ಮತ್ತು ದೃಷ್ಟಿ ಕಳೆದುಕೊಳ್ಳಬಹುದು ಎಂದು ಜೀವಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಮಂಗಳ ಗ್ರಹದಲ್ಲಿರುವ ತೀವ್ರ ಕಠಿಣ ಪರಿಸ್ಥಿತಿಯಿಂದಾಗಿ ಅಲ್ಲಿ ಅಭಿವೃದ್ಧಿ ಹೊಂದುವುದು ಬಿಡಿ, ಬದುಕಲೂ ಕಷ್ಟವಾಗಬಹುದು. ಒಂದು ವೇಳೆ ಅಲ್ಲಿ ಮಾನವರು ನೆಲೆಸಿದರೂ ಅವರಿಗೆ ಹುಟ್ಟುವ ಮಕ್ಕಳು ತೀವ್ರವಾದ ರೂಪಾಂತರ ಮತ್ತು ವಿಕಸನೀಯ ಬದಲಾವಣೆಗೆ ಒಳಗಾಗುವ ಸಾಧ್ಯತೆಯಿದೆ. ಕಡಿಮೆ ಗುರುತ್ವಾಕರ್ಷಣೆ ಶಕ್ತಿ ಮತ್ತು ಹೆಚ್ಚಿನ ವಿಕಿರಣ ಕಾರಣದಿಂದ ಈ ರೂಪಾಂತರ ಸಂಭವಿಸಬಹುದು ಮತ್ತು ಹಸಿರು ಚರ್ಮ, ದುರ್ಬಲ ಸ್ನಾಯು, ದುರ್ಬಲ ದೃಷ್ಟಿಗೆ ಕಾರಣವಾಗಬಹುದು ಎಂದು ಟೆಕ್ಸಾಸ್ ವಿವಿಯ ಜೀವಶಾಸ್ತ್ರಜ್ಞ ಡಾ. ಸ್ಕಾಟ್ ಸೊಲೊಮನ್ ಹೇಳಿದ್ದಾರೆ.