ಹಮಾಸ್ ನ 100ಕ್ಕೂ ಅಧಿಕ ನೆಲೆಗಳ ಮೇಲೆ ಇಸ್ರೇಲ್ ದಾಳಿ
ಗಾಝಾ: ಗಾಝಾ ಪಟ್ಟಿಯಲ್ಲಿ ಹಮಾಸ್ ನ 100ಕ್ಕೂ ಅಧಿಕ ನೆಲೆಗಳನ್ನು ಗುರಿಯಾಗಿಸಿ ತನ್ನ ಪಡೆಗಳು ನೆಲ, ಆಕಾಶ ಮತ್ತು ನೀರಿನ ಮೇಲಿಂದ ದಾಳಿಯನ್ನು ನಡೆಸಿದೆ ಎಂದು ಇಸ್ರೇಲ್ ಶುಕ್ರವಾರ ಹೇಳಿದೆ.
ಗುರುವಾರ ರಾತ್ರಿ ನಡೆಸಿದ ದಾಳಿಯಲ್ಲಿ ಹಮಾಸ್ ನ ಕಮಾಂಡ್ ನೆಲೆಗಳು, ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರ ಹಾಗೂ ಇತರ ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ. ಮಧ್ಯಗಾಝಾದ ಅಲ್-ಬುರೆಜಿ ಪ್ರದೇಶದಲ್ಲಿ ಹಮಾಸ್ ನ ತಂಡವೊಂದು ಇಸ್ರೇಲ್ ಟ್ಯಾಂಕ್ ನ ಮೇಲೆ ಹೊಂಚು ದಾಳಿ ನಡೆಸಲು ಯೋಜನೆ ರೂಪಿಸಿರುವ ಬಗ್ಗೆ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಆ ಪ್ರದೇಶದ ಮೇಲೆ ದಾಳಿ ನಡೆಸಿದಾಗ ತಂಡದ ಸದಸ್ಯರು ಕಟ್ಟಡವೊಂದರಲ್ಲಿ ಅವಿತುಕೊಂಡರು. ಆಗ ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆಯ ಹೇಳಿಕೆ ತಿಳಿಸಿದೆ.
ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದಲ್ಲಿ ಹಲವಾರು ರಾಕೆಟ್ ಲಾಂಚರ್ ವ್ಯವಸ್ಥೆಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಹಮಾಸ್ ನ ಹಲವು ಸದಸ್ಯರು ಹತರಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.