ನ್ಯೂಯಾರ್ಕ್: ಭಾರೀ ಮಳೆ- ಪ್ರವಾಹ ತುರ್ತುಪರಿಸ್ಥಿತಿ ಘೋಷಣೆ
ನ್ಯೂಯಾರ್ಕ್ : ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಶುಕ್ರವಾರ ನಿರಂತರ ಧಾರಾಕಾರ ಮಳೆ ಸುರಿದಿದ್ದು ಹಲವು ಸುರಂಗಮಾರ್ಗಗಳು ಹಾಗೂ ಪ್ರಯಾಣಿಕರ ರೈಲು ಮಾರ್ಗಗಳು ನೀರಿನಲ್ಲಿ ಮುಳುಗಿದೆ. ಜನವಸತಿ ಕಟ್ಟಡಗಳ ನೆಲಮಾಳಿಗೆಗೆ ನೀರು ನುಗ್ಗಿದ್ದು ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಲಗಾರ್ಡಿಯ ವಿಮಾನನಿಲ್ದಾಣದ ಟರ್ಮಿನಲ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ.
ಗುರುವಾರ ರಾತ್ರಿ ಆರಂಭವಾದ ಮಳೆ ಶುಕ್ರವಾ ರವೂ ಮುಂದುವರಿದ ಹಿನ್ನೆಲೆಯಲ್ಲಿ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸುಮಾರು 200 ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಗಳಲ್ಲಿ ನೆರೆನೀರು ನುಗ್ಗಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ‘ಮನೆಯಲ್ಲಿದ್ದವರು ಮನೆಯೊಳಗೇ ಸುರಕ್ಷಿತವಾಗಿರಿ. ಕೆಲಸದ ಸ್ಥಳ ಅಥವಾ ಶಾಲೆಯಲ್ಲಿ ಇರುವವರು ಅಲ್ಲಿಯೇ ಸದ್ಯಕ್ಕೆ ರಕ್ಷಣೆ ಪಡೆಯುವುದು ಒಳಿತು’ ಎಂದು ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಜನತೆಯನ್ನು ಆಗ್ರಹಿಸಿದ್ದಾರೆ.
ನ್ಯೂಯಾರ್ಕ್ ನಗರ, ಲಾಂಗ್ ಐಲ್ಯಾಂಡ್ ಮತ್ತು ಹಡ್ಸನ್ ವ್ಯಾಲಿಯಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದು ಈ ಪ್ರದೇಶದಲ್ಲಿ ಇನ್ನಷ್ಟು ಮಳೆ ಸುರಿಯುವ ಸೂಚನೆ ಇರುವುದರಿಂದ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಸಲಹೆ ನೀಡಿದ್ದಾರೆ.