ಕದನ ವಿರಾಮ ಒಪ್ಪಂದದ ಬಳಿಕವೂ ಹಿಜ್ಬುಲ್ಲಾ ವಿರುದ್ಧದ ಕಾರ್ಯಾಚರಣೆ ನಿಲ್ಲದು : ನೆತನ್ಯಾಹು

Update: 2024-11-19 16:38 GMT

ಬೆಂಜಮಿನ್ ನೆತನ್ಯಾಹು | PC : PTI 

ಜೆರುಸಲೇಂ : ಲೆಬನಾನ್ ನಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟರೂ ಲೆಬನಾನ್ ಮೂಲದ ಹಿಜ್ಬುಲ್ಲಾ ಗುಂಪಿನ ವಿರುದ್ಧದ ಕಾರ್ಯಾಚರಣೆಯನ್ನು ಇಸ್ರೇಲ್ ಮುಂದುವರಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

`ಹಾಳೆಗಳಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವುದು ಮಹತ್ವದ ವಿಷಯವಲ್ಲ. ಉತ್ತರ ಇಸ್ರೇಲ್‍ನಲ್ಲಿ ನಮ್ಮ ಭದ್ರತೆಯನ್ನು ಖಚಿತಪಡಿಸುವುದು ಮುಖ್ಯವಾಗಿದೆ. ಹಿಜ್ಬುಲ್ಲಾ ದಾಳಿಯ ವಿರುದ್ಧ ಮತ್ತು ಅವರು ಮರು ಸಂಘಟಿತರಾಗದಂತೆ ಖಚಿತಪಡಿಸಿಕೊಳ್ಳಲು ನಮ್ಮ ಕಾರ್ಯಾಚರಣೆಯನ್ನು ವ್ಯವಸ್ಥಿತವಾಗಿ ಮುಂದುವರಿಸಲಿದ್ದೇವೆ. ಕದನ ವಿರಾಮದ ಬಳಿಕವೂ ಕಾರ್ಯಾಚರಣೆ ಮುಂದುವರಿಯಲಿದೆ. ಕದನ ವಿರಾಮ ಏರ್ಪಟ್ಟರೂ ಅದನ್ನು ಹಿಜ್ಬುಲ್ಲಾ ಗೌರವಿಸುತ್ತದೆ ಎಂಬುದಕ್ಕೆ ಯಾವುದೇ ನಿದರ್ಶನಗಳಿಲ್ಲ ' ಎಂದು ಇಸ್ರೇಲ್ ಸಂಸತ್‍ನಲ್ಲಿ ಮಾತನಾಡಿದ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ.

ಈ ಮಧ್ಯೆ, ಕದನ ವಿರಾಮದ ಕುರಿತು ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಲೆಬನಾನ್ ಸರಕಾರ ಬಹುತೇಕ ಅನುಮೋದಿಸಿದ್ದು, ಅಮೆರಿಕಕ್ಕೆ ಪ್ರತಿಕ್ರಿಯಿಸುವ ಮೊದಲು ಅಂತಿಮ ಹಂತದ ಪರಿಶೀಲನೆಯಲ್ಲಿ ತೊಡಗಿದೆ ಎಂದು ಲೆಬನಾನ್ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಕದನ ವಿರಾಮ ಒಪ್ಪಂದದ ಬಳಿಕ ಇಸ್ರೇಲ್-ಲೆಬನಾನ್ ಗಡಿ ಸನಿಹ ಹಿಜ್ಬುಲ್ಲಾದ ಉಪಸ್ಥಿತಿ ಇರಬಾರದು ಎಂದು ಇಸ್ರೇಲ್ ಪಟ್ಟುಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News