ಹಮಾಸ್ ವಿರುದ್ಧದ ಸಮರ ವರ್ಷವಿಡೀ ಮುಂದುವರಿಯಲಿದೆ ; ಇಸ್ರೇಲ್ ಸೇನಾ ವಕ್ತಾರ
ಗಾಝಾ: ಗಾಝಾದ ಮೇಲೆ ಇಸ್ರೇಲ್ ಸೇನೆಯ ಬಾಂಬ್ ದಾಳಿಯ ಅವ್ಯಾಹತವಾಗಿ ನಡೆಯುತ್ತಿರುವಂತೆಯೇ, ಇಸ್ರೇಲ್ ಮಿಲಿಟರಿ ವಕ್ತಾರ ಸೋಮವಾರ ಹೇಳಿಕೆಯೊಂದನ್ನು ನೀಡಿ, ಮೂರು ತಿಂಗಳಿನಿಂದ ಹಮಾಸ್ ಜೊತೆ ನಡೆಯುತ್ತಿರುವ ಯುದ್ಧವು 2024 ಇಸವಿಯುದ್ದಕ್ಕೂ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಹಮಾಸ್ ಜೊತೆ ದೀರ್ಘಾವಧಿಯ ಸಂಘರ್ಷವನ್ನು ಮುಂದುವರಿಸಲು ಇಸ್ರೇಲ್ ಸೇನೆ ಸಿದ್ಧತೆಯನ್ನು ನಡೆಸುತ್ತಿದೆ. ಈ ಯುದ್ಧವು ವರ್ಷವಿಡೀ ನಡೆಯುವ ನಿರೀಕ್ಷೆಯಿದೆ ಎಂದು ಇಸ್ರೇಲಿ ಸೇನಾ ವಕ್ತಾರ ಡೇನಿಯಲ್ ಹಗಾರಿ ತಿಳಿಸಿದ್ದಾರೆ.
ಗಾಝಾದಲ್ಲಿ ಪಡೆಗಳ ಮರುನಿಯೋಜನೆಯ ಕಾರ್ಯತಂತ್ರವನ್ನು ಇಸ್ರೇಲ್ ಅನುಸರಿಸುತ್ತಿದೆ ಎಂದು ಹೇಳಿದ ಅವರು, ಯುದ್ಧವು ಮುಂದುವರಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀಸಲು ಯೋಧರು ಬೇಕಾಗಬಹುದು ಎಂದವರು ಹೇಳಿದ್ದಾರೆ.
ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನವರೆಗೂ ಇಸ್ರೇಲಿ ಪಡೆಗಳು ರಫಾ ನಗರದಲ್ಲಿ ಕ್ಷಿಪಣಿ ದಾಳಿಗಳನ್ನು ನಡೆಸಿವೆ ಹಾಗೂ ಉತ್ತರಗಾಝಾ ಪ್ರದೇಶದಲ್ಲಿರುವ ಜಬಾಲಿಯಾ ನಿರಾಶ್ರಿ ಶಿಬಿರದ ಸುತ್ತಮುತ್ತಲೂ ಶೆಲ್ ದಾಳಿಗಳನ್ನು ನಡೆಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಬಾಲಿಯಾದಲ್ಲಿರುವ ಇಸ್ರೇಲ್ ಸೇನೆಯ ಬಾಂಬ್ ದಾಳಿಯೊಂದಿಗೆ ನೆಲಸಮಗೊಂಡ ಮನೆಗಳ ಅವಶೇಷಗಳ ನಡುವೆ ಒಂದೇ ಕುಟುಂಬದ 15 ಮಂದಿಯ ಮೃತದೇಹಗಳು ಪತ್ತೆಯಾಗಿವೆಯೆಂದು ಹಮಾಸ್ ನಿಯಂತ್ರಿತ ಗಾಝಾದ ಗೃಹ ಸಚಿವಾಲಯ ತಿಳಿಸಿದೆ.