ಟ್ರಂಪ್ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ: ಹೆಚ್ಚುವರಿ ಸುಂಕ ಬೆದರಿಕೆಗೆ ಚೀನಾ ಪ್ರತಿಕ್ರಿಯೆ

ಡೊನಾಲ್ಡ್ ಟ್ರಂಪ್ | PTI
ಬೀಜಿಂಗ್: ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆಯಿಂದ ಆಮದಾಗುವ ಸರಕುಗಳ ಮೇಲೆ ಹೊಸದಾಗಿ 50% ಸುಂಕ ವಿಧಿಸುವ ಬೆದರಿಕೆ ಒಡ್ಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ. ಅಮೆರಿಕದ ಸುಂಕಗಳ ವಿರುದ್ಧದ ಹೋರಾಟದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಚೀನಾ ಪ್ರತಿಕ್ರಿಯೆ ನೀಡಿದೆ.
ಚೀನಾದ ವಿರುದ್ಧ ಸುಂಕವನ್ನು ಹೆಚ್ಚಿಸುವ ಅಮೆರಿಕದ ಬೆದರಿಕೆ ಈಗಾಗಲೇ ಮಾಡಿರುವ ಪ್ರಮಾದದ ಮೇಲೆ ಮತ್ತೊಂದು ಪ್ರಮಾದವಾಗಿದ್ದು ಇದು ಅಮೆರಿಕದ ಬ್ಲ್ಯಾಕ್ ಮೇಲ್ ಸ್ವಭಾವವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಇದನ್ನು ಚೀನಾ ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಚೀನಾದ ವಾಣಿಜ್ಯ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ ಎ ಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಸುಂಕಗಳು ಚೀನಾದ ಮೇಲೆ ಪರಿಣಾಮ ಬೀರುವುದಾದರೂ, ಆಕಾಶವೇನೂ ಬೀಳುವುದಿಲ್ಲ. 2017ರಲ್ಲಿ ಅಮೆರಿಕ ವ್ಯಾಪಾರ ಸಮರ ಆರಂಭಿಸಿದಂದಿನಿಂದಲೂ, ಅಮೆರಿಕ ಎಷ್ಟೇ ಒತ್ತಡ ಹಾಕಿದರೂ ನಾವು ಅಭಿವೃದ್ಧಿ ಮತ್ತು ಪ್ರಗತಿ ಹೊಂದುವುದನ್ನು, ಪ್ರತಿರೋಧ ತೋರಿಸುವುದನ್ನು ಮುಂದುವರಿಸಿದ್ದೇವೆ. ನಮ್ಮ ಮೇಲೆ ಒತ್ತಡ ಹೆಚ್ಚಿದಷ್ಟೂ ನಾವು ಬಲಶಾಲಿಗಳಾಗುತ್ತೇವೆ' ಎಂದು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಮುಖವಾಣಿ `ಪೀಪಲ್ಸ್ ಡೈಲಿ' ವರದಿ ಮಾಡಿದೆ.
`ಬದಲಾಗುತ್ತಿರುವ ಅಂತರಾಷ್ಟ್ರೀಯ ಭೂದೃಶ್ಯವನ್ನು ಲೆಕ್ಕಿಸದೆ, ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆಯಾಗಿ, ಎರಡನೇ ಅತೀ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿ ಚೀನಾವು ತನ್ನ ಬಾಗಿಲುಗಳನ್ನು ಅಗಲವಾಗಿ ತೆರೆದಿಡುವುದನ್ನು ಮುಂದುವರಿಸಲಿದೆ' ಎಂದು ಚೀನಾದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.