ಸಾಧ್ಯವಿದ್ದರೆ ಉಕ್ರೇನ್‍ಗೆ ಬಂದು ಯುದ್ಧ ನಿಲ್ಲಿಸಿ: ಟ್ರಂಪ್‍ಗೆ ಝೆಲೆನ್‍ಸ್ಕಿ ಸವಾಲು

Update: 2024-01-21 23:54 IST
ಸಾಧ್ಯವಿದ್ದರೆ ಉಕ್ರೇನ್‍ಗೆ ಬಂದು ಯುದ್ಧ ನಿಲ್ಲಿಸಿ: ಟ್ರಂಪ್‍ಗೆ ಝೆಲೆನ್‍ಸ್ಕಿ ಸವಾಲು

Image Credit source: PTI

  • whatsapp icon

ಕೀವ್: ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಗೊಂಡರೆ ಉಕ್ರೇನ್‍ನೊಂದಿಗಿನ ರಶ್ಯದ ಯುದ್ಧವನ್ನು 24 ಗಂಟೆಯೊಳಗೆ ನಿಲ್ಲಿಸುತ್ತೇನೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆ ಅತ್ಯಂತ ಅಪಾಯಕಾರಿಯಾಗಿದೆ. ಟ್ರಂಪ್ ಮತ್ತೆ ಅಧ್ಯಕ್ಷನಾಗುವ ನಿರೀಕ್ಷೆಯಿಂದ ಅತ್ಯಂತ ಚಿಂತಿತನಾಗಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.

`ನಿಮ್ಮನ್ನು (ಟ್ರಂಪ್) ಉಕ್ರೇನ್‍ಗೆ ಆಹ್ವಾನಿಸುತ್ತಿದ್ದೇನೆ. ನಿಮ್ಮಿಂದ ಸಾಧ್ಯವಿದ್ದರೆ ಮುಂಚೂಣಿ ಯುದ್ಧಕ್ಷೇತ್ರಕ್ಕೆ ಬನ್ನಿ ಮತ್ತು 24 ಗಂಟೆಯೊಳಗೆ ಯುದ್ಧನಿಲ್ಲಿಸಿ' ಎಂದು ಝೆಲೆನ್‍ಸ್ಕಿ ಸವಾಲು ಹಾಕಿದ್ದಾರೆ.

`ಟ್ರಂಪ್ ಅವರ ಹೇಳಿಕೆಗಳು ಅತ್ಯಂತ ಅಪಾಯಕಾರಿಯಾಗಿದೆ ಮತ್ತು ಅಮೆರಿಕ ಏಕಪಕ್ಷೀಯ ಕ್ರಮ ಕೈಗೊಳ್ಳುವ ಆತಂಕವನ್ನು ಮೂಡಿಸಿದೆ. ಅವರ ಕಲ್ಪನೆಯ ಸಂಧಾನ ಪ್ರಕ್ರಿಯೆಯು ಉಕ್ರೇನ್ ತನ್ನ ಹಲವು ಭಾಗಗಳನ್ನು ರಶ್ಯಕ್ಕೆ ಬಿಟ್ಟುಕೊಡುವುದನ್ನು ಒಳಗೊಂಡಿರುವಂತೆ ತೋರುತ್ತಿದೆ. ಟ್ರಂಪ್ ತಮ್ಮ `ಶಾಂತಿ ಯೋಜನೆ'ಯ ವಿವರವನ್ನು ಒದಗಿಸಬೇಕು' ಎಂದು ಝೆಲೆನ್‍ಸ್ಕಿ ಆಗ್ರಹಿಸಿದ್ದಾರೆ. `ಟ್ರಂಪ್ ರಶ್ಯದ ಅಭಿಪ್ರಾಯವನ್ನೂ ಕೇಳದೆ ತಮ್ಮದೇ ನಿರ್ಧಾರ ಕೈಗೊಳ್ಳುವ ವ್ಯಕ್ತಿ. ಅವರ ನಿರ್ಧಾರದಿಂದ ಉಕ್ರೇನ್‍ಗೆ ಹೆಚ್ಚಿನ ನಷ್ಟವಾಗುವುದರಲ್ಲಿ ಸಂದೇಹವಿಲ್ಲ. ತಮ್ಮ ಯೋಜನೆಯನ್ನು ಹೇಗಾದರೂ ಮಾಡಿ ಜಾರಿಗೊಳಿಸುವ ಜಾಯಮಾನ ಅವರದ್ದು. ಈ ಬಗ್ಗೆ ನಮಗೆ ಆತಂಕವಿದೆ' ಎಂದು ಝೆಲೆನ್‍ಸ್ಕಿ ಹೇಳಿದ್ದಾರೆ.

ಉಕ್ರೇನ್-ರಶ್ಯದ ನಡುವೆ ಶಾಂತಿ ಮಾತುಕತೆಗೆ ನೇತೃತ್ವ ವಹಿಸಲು ತಾನು ಅತ್ಯಂತ ಸೂಕ್ತ ಮುಖಂಡ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವ ಟ್ರಂಪ್, ರಶ್ಯ ಮತ್ತು ಉಕ್ರೇನ್ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಉಕ್ರೇನ್ ಮೇಲೆ ದಾಳಿ ನಡೆಸಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅತ್ಯಂತ ಜಾಣ ರಾಜಕೀಯ ಆಟಗಾರ ಎಂದು ಶ್ಲಾಘಿಸಿರುವುದು ಉಕ್ರೇನ್ ಮುಖಂಡರ ಕಳವಳಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News