ಕಲಬುರಗಿ | ಅಪಘಾತದಲ್ಲಿ ಗೆಳೆಯ ಮೃತ್ಯು : ಮನನೊಂದು ಯುವಕ ಆತ್ಮಹತ್ಯೆ
ಕಲಬುರಗಿ : ತನ್ನ ಬಾಲ್ಯದ ಗೆಳೆಯ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಆತನದ್ದೇ ನೆನಪಿನಲ್ಲಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಶಿವರಾಜ ಮಡಿವಾಳ (22) ಆತ್ಮಹತ್ಯೆಗೆ ಶರಣಾದ ಯುವಕ ಎಂದು ತಿಳಿದುಬಂದಿದೆ.
ಬಾಲ್ಯದ ಸ್ನೇಹಿತ ಪ್ರವೀಣ್ ಚವ್ಹಾಣ್ ಎಂಬಾತ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮನನೊಂದ ಶಿವರಾಜ ಮಡಿವಾಳ ಭಾನುವಾರ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವರಾಜ ಕೆಲಸಕ್ಕಾಗಿ ಮಹಾರಾಷ್ಟ್ರದ ಪುಣೆಗೆ ತೆರಳಿ ಅಲ್ಲಿಯೇ ಕುಟುಂಬಸ್ಥರ ಜತೆಗೆ ವಾಸವಾಗಿದ್ದರು. ಗೆಳೆಯನ ಸಾವಿನಿಂದ ಶಿವರಾಜ ಬಹಳಷ್ಟು ಜುಗುಪ್ಸೆಗೊಂಡಿದ್ದರು. ಬ್ಯಾಂಕ್ ಕೆಲಸಕ್ಕೆಂದು ಕಲಬುರಗಿಗೆ ಬಂದಿದ್ದ ಶಿವರಾಜ ಇಲ್ಲಿನ ಸ್ಟೇಷನ್ ಪ್ರದೇಶದ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ.
ಈ ಕುರಿತು ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.