ಕಲಬುರಗಿ | ಜ.19ರಂದು ವೇಮನ ಜಯಂತಿ : ಉಚಿತ ಆರೋಗ್ಯ ತಪಾಸಣಾ ಶಿಬಿರ ; ಕೃತಿ ಲೋಕಾರ್ಪಣೆ
ಕಲಬುರಗಿ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಕಲಬುರಗಿ, ಜಿಲ್ಲಾ ಪಂಚಾಯತ್, ರೆಡ್ಡಿ ಸಮಾಜ ಕಲಬುರಗಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಪತ್ತಿನ ಸಂಘದ ಆಶ್ರಯದಲ್ಲಿ ಜ.19 ರಂದು 612ನೇ ಮಹಾಯೋಗಿ ವೇಮನ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಪ್ರೊ.ಚೆನ್ನಾರೆಡ್ಡಿ ಪಾಟೀಲ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಯಂತಿಯ ಪ್ರಯುಕ್ತ ಅಂದು ಮುಂಜಾನೆ 9 ಗಂಟೆಗೆ ಜಗತ್ ವೃತ್ತದಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರ ವರೆಗೆ ವೇಮನ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ.
ರೆಡ್ಡಿ ಸಮಾಜ, ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘ, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ, ಕಾಮರೆಡ್ಡಿ ಆಸ್ಪತ್ರೆ ಮತ್ತು ಆಶೀರ್ವಾದ ಆಸ್ಪತ್ರೆಗಳ ಸಹಯೋಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ಖ್ಯಾತ ಮತ್ತು ವಿಶೇಷ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸೆ ಮತ್ತು ಮದುಮೇಹದ ಕಣ್ಣಿನ ಕಾಯಿಲೆಗಳ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಗಮಿಸುವರು, ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕರದ ಡಾ.ಅಜಯ್ ಸಿಂಗ್, ಎಂ.ವೈ.ಪಾಟೀಲ್, ಕನೀಜ್ ಫಾತೀಮಾ, ಸಿಎಂ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಹಾಗೂ ನಿಜ ಶರಣ ಅಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಗೌರವ ಉಪಸ್ಥಿತವಿರುವರು. ಈ ವೇಳೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಸಾಹಿತಿ, ಪತ್ರಕರ್ತ ಮಹಿಪಾಲ್ ರೆಡ್ಡಿ ಮುನ್ನೂರು ರಚಿತದ "ಜೀವಕಾರುಣ್ಯದ ಕವಿ ಮಹಾಯೋಗಿ ವೇಮನ" ಎಂಬ ಕೃತಿಯ ಲೋಕಾರ್ಪಣೆ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ರಾಜೇಶ್ವರಿ ವಿಶ್ವನಾಥರೆಡ್ಡಿ, ಡಾ.ವಿಶಾಲಕ್ಷಿ ರೆಡ್ಡಿ, ಡಾ.ಮಹೇಶರೆಡ್ಡಿ, ಡಾ.ಸುನೀಲ್ ರೆಡ್ಡಿ, ಡಾ.ಲಕ್ಷ್ಮೀ, ವಿಶ್ವನಾಥ ಕಾಮರೆಡ್ಡಿ, ವಿಜಯಕುಮಾರೆಡ್ಡಿ, ಚಂದ್ರಶೇಖರ ರೆಡ್ಡಿ, ಶಿವಲಿಂಗರೆಡ್ಡಿ ಸೇರಿದಂತೆ ಇತರರು ಇದ್ದರು.