ಕಲಬುರಗಿ | ಶಾಲೆಯಲ್ಲಿ ಲ್ಯಾಪ್‌ಟಾಪ್, ಪ್ರಿಂಟರ್ ಕಳವು : ಆರೋಪಿ ಬಂಧನ
ಕಲಬುರಗಿ : ಆಳಂದ ತಾಲ್ಲೂಕಿನ ಲಾಡ್ ಚಿಂಚೋಳಿ ಹತ್ತಿರದ ನವಭಾರತ ಶಿಕ್ಷಣ ಸಂಸ್ಥೆಯ ಶಾಲೆಯ ಆಫೀಸ್ ರೂಮಿನ ಬೀಗ ಮುರಿದು ಲ್ಯಾಪ್ಟಾಪ್, ಪ್ರಿಂಟರ್ ಮತ್ತು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ನರೋಣಾ ಪೊಲೀಸರು ಬಂಧಿಸಿದ್ದಾರೆ.
ಲಾಡ್ ಚಿಂಚೋಳಿ ಗ್ರಾಮದ ನವೀನ್ ತಂದೆ ಜಯಾನಂದ ಹತ್ತರಕಿ (27) ಎಂಬಾತನನ್ನು ಬಂಧಿಸಿ, 45 ಸಾವಿರ ರೂ. ಮೌಲ್ಯದ ಡೆಲ್ ಕಂಪನಿಯ ಲ್ಯಾಪ್‌ಟಾಪ್, 45 ಸಾವಿರ ರೂ. ಮೌಲ್ಯದ ಹೆಚ್ಪಿ ಕಂಪನಿಯ ಪ್ರಿಂಟರ್, 1,500 ರೂ. ಮೌಲ್ಯದ ಖಾಲಿ ಗ್ಯಾಸ್ ಸಿಲಿಂಡರ್ ಮತ್ತು 2,500 ರೂ.ಮೌಲ್ಯದ ತುಂಬಿದ ಗ್ಯಾಸ್ ಸಿಲಿಂಡರ್ ಸೇರಿ 94 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಯ ಬೀಗ ಮುರಿದು ಲ್ಯಾಪ್ಟಾಪ್, ಪ್ರಿಂಟರ್, ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಬಗ್ಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಗೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್ ಅವರ ಮಾರ್ಗದರ್ಶನದಲ್ಲಿ ಆಳಂದ ಡಿಎಸ್ಪಿ ಗೋಪಿ ಬಿ.ಆರ್., ಸಿಪಿಐ ಪ್ರಕಾಶ ಆರ್.ಯಾತನೂರ ಅವರ ನೇತೃತ್ವದಲ್ಲಿ ನರೋಣಾ ಪಿಎಸ್ಐ ಸಿದ್ದರಾಮ, ಸಿಬ್ಬಂದಿಗಳಾದ ಭಗವಂತರಾಯ, ರೇವಣಸಿದ್ದಪ್ಪ ಬಿರಾದಾರ, ಭೀಮಾಶಂಕರ ಉಡಗಿ, ರಾಮಲಿಂಗ, ರೇವಣಸಿದ್ದಪ್ಪ, ನಾಗರಾಜ, ಲಕ್ಷ್ಮೀಪುತ್ರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.