ಕಲಬುರಗಿ | ಪ್ಲಾಸ್ಟಿಕ್ ಮುಕ್ತ ಹಸಿರು ಶಾಲಾ ವಾತಾವರಣ ನಿರ್ಮಿಸೋಣ : ಚಂದ್ರಶೇಖರ ಪಾಟೀಲ ಸಲಹೆ
ಕಲಬುರಗಿ : ಆಳಂದ ತಾಲ್ಲೂಕಿನ ಯಳಸಂಗಿ ಸರಕಾರಿ ಪ್ರೌಢ ಶಾಲೆಯ ಇಕೋ ಕ್ಲಬ್ ಅಡಿಯಲ್ಲಿ ವಿಶೇಷ ಉಪನ್ಯಾಸ ಹಾಗೂ ವನ ಭೇಟಿ ಮತ್ತು ಗಣಿತ ಪಾಠೋಪಕರಣಗಳ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಡಲಗಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಚಂದ್ರಶೇಖರ ಪಾಟೀಲ, 'ಅಭಿವೃದ್ಧಿಯ ಜೊತೆಗೆ ನಮ್ಮ ಅವನತಿಗೆ ಕಾರಣವಾಗಿರುವ ವಸ್ತುವೆಂದರೆ ಪ್ಲಾಸ್ಟಿಕ್. ಇದು ನೀವು ನನ್ನನ್ನು ಎಸೆದಿದ್ದೀರಿ ನಾಳೆ ನಿಮ್ಮನ್ನು ನಾಶ ಮಾಡುತ್ತೇನೆ ಎಂದು ಹೇಳುತ್ತಿದೆ. ಆದ್ದರಿಂದ ನಮ್ಮ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ನಾವೆಲ್ಲರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಮುಕ್ತ ಹಸಿರು ಶಾಲಾ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ' ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮನೆಯಲ್ಲಿ ಉಳಿದ ಆಹಾರವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆಯುವುದರಿಂದ ಅದರಲ್ಲಿರುವ ಆಹಾರ ಪ್ರಾಣಿ ಪಕ್ಷಿಗಳು, ದನ ಕರುಗಳು ತಿನ್ನುವುದರ ಪರಿಣಾಮದಿಂದಾಗಿ ಪ್ಲಾಸ್ಟಿಕ್ ನಲ್ಲಿ ಹಾಲಿನ ಅಂಶ ಕಂಡು ಬಂದಿರುವುದು ಅಘಾತಕಾರಿ ವಿಷಯವಾಗಿದೆ. ಒಟ್ಟಿನಲ್ಲಿ ಪ್ಲಾಸ್ಟಿಕ್ ಅನ್ನು ಅತಿ ಹೆಚ್ಚು ಉಪಯೋಗಿಸುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಅನ್ನು ನಾವು ತಿರಸ್ಕರಿಸಬೇಕು, ಅದರ ಮರುಬಳಕೆ ಮಾಡಬೇಕು ಮತ್ತು ಕಡಿಮೆ ಬಳಕೆ ಮಾಡುವುದರಿಂದ ಭೂಮಿ ಮೇಲಿರುವ ಜೀವ ಸಂಕುಲಗಳನ್ನು ರಕ್ಷಣೆ ಮಾಡಬೇಕು ಎಂದು ಮಕ್ಕಳಿಗೆ ಕಿವಿಮಾತುಗಳು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯಗುರು ಶೈಲಾ ಮಠ ವಹಿಸಿದ್ದರು. ಶಿಕ್ಷಕ ಸಾಗರ್ ಯಲ್ದೆ ಪ್ರಸ್ತಾವಿಕವಾಗಿ ಮಾತನಾಡಿದರು. ಸೋಮನಾಥ್ ಕೋರಿ ನಿರೂಪಿಸಿದರು, ರಾಜು ಚೌಹಾಣ್ ರವರ ವಂದನಾರ್ಪಣೆಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.