ಕಲಬುರಗಿ | ಪ್ರತಿಭಾವಂತರ ವಿದ್ಯಾರ್ಥಿಗಳ ಶಿಷ್ಯವೇತನಕ್ಕಾಗಿ ಎಸ್.ಬಿ.ಆರ್-ಸಿಇಟಿ ಪರೀಕ್ಷೆ

Update: 2025-01-31 16:09 IST
Photo of Press meet
  • whatsapp icon

ಕಲಬುರಗಿ : 2025-26 ಹಾಗೂ 2026-27ನೇ ಸಾಲಿನಲ್ಲಿ ಎರಡು ವರ್ಷದ ಪಿಯುಸಿ ವಿಜ್ಞಾನ ವಿಭಾಗಕ್ಕೆ ಎಸ್.ಬಿ.ಆರ್ ಕಾಲೇಜಿನಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಎಸ್.ಬಿ.ಆರ್-ಸಿಇಟಿ ಪರೀಕ್ಷೆ ನಡೆಸಲಾಗುತ್ತಿದ್ದು, ಈ ಬಾರಿ ಟಾಪ್ ಸಾಧಿಸಿದ 120 ವಿದ್ಯಾರ್ಥಿಗಳಿಗೆ 3.5 ಕೋಟಿ ರೂ. ಶಿಷ್ಯವೇತನ ನೀಡಲಾಗುವುದು ಎಂದು ವಿದ್ಯಾಭಂಡಾರಿ ಡಾ.ಶರಣಬಸವಪ್ಪ ಅಪ್ಪಾ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಡಾ.ದಾಕ್ಷಾಯಿಣಿ ಅವ್ವಾಜೀ ಅವರು ತಿಳಿಸಿದರು.

ಗುರುವಾರ ಇಲ್ಲಿನ ಶ್ರೀ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮನೆಯಲ್ಲಿ ಕರೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳಿಗೆ ಚಿ.ದೊಡ್ಡಪ್ಪ ಅಪ್ಪ ಅವರ ಹೆಸರಿನಲ್ಲಿ ಶಿಷ್ಯವೇತನ ನೀಡಲಾಗುತ್ತಿದ್ದು, ಕಳೆದ ಬಾರಿ 90 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ 120 ವಿದ್ಯಾರ್ಥಿಗಳಿಗೆ ಅವಕಾಶ ಕೊಡಲಾಗಿದ್ದು, ಸಿ.ಬಿ.ಎಸ್.ಸಿ., ಐಸಿಎಸ್ಇ ವಿದ್ಯಾರ್ಥಿಗಳಿಗೆ ಏ.6ರಂದು ಹಾಗೂ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಏ.13ರಂದು ಮಧ್ಯಾಹ್ನ 3 ರಿಂದ ಸಾಯಂಕಾಲ 5 ಗಂಟೆವರೆಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಆನ್ ಲೈನ್ ನೋಂದಣಿಗೆ ಅವಕಾಶ :

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು 3.5 ರೂ. ಕೋಟಿ ಮೌಲ್ಯದ ಚಿ.ದೊಡ್ಡಪ್ಪ ಅಪ್ಪ ಅವರ ಹೆಸರಿನಲ್ಲಿ ಶಿಷ್ಯವೇತನ ನೀಡುವ ಕಾರ್ಯಕ್ರಮ ಇದಾಗಿದ್ದು, ಆನ್ ಲೈನ್ ನೋಂದಣಿಗೆ ಮಾಡಿಕೊಳ್ಳಬೇಕಾಗಿದ್ದು, ಸಿ.ಬಿ.ಎಸ್.ಸಿ., ಐಸಿಎಸ್ಇ ವಿದ್ಯಾರ್ಥಿಗಳು ಏಪ್ರಿಲ್ 4 ಒಳಗಾಗಿ ಹಾಗೂ ಎಸೆಸೆಲ್ಸಿ ವಿದ್ಯಾರ್ಥಿಗಳು ಏಪ್ರಿಲ್ 11ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. Www.sbrpsglb.in ನಲ್ಲಿ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಟಾಪ್ ಪಡೆದವರಿಗೆ ಶುಲ್ಕ ವಿನಾಯಿತಿ :

ಎಸ್.ಬಿ.ಆರ್-ಸಿಇಟಿ ಪರೀಕ್ಷೆಯಲ್ಲಿ ಟಾಪ್ ಗಳಿಸಿದ ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಮೊದಲ 1 ರಿಂದ 40 ರ್‍ಯಾಂಕ್ ವಿಜೇತರಿಗೆ ಹಾಸ್ಟೆಲ್ ಹಾಗೂ ಕಾಲೇಜು ಉಚಿತ ಪ್ರವೇಶಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. 41 ರಿಂದ 80 ರ್‍ಯಾಂಕ್ ಪಡೆದವರಿಗೆ ಹಾಸ್ಟೆಲ್ ಹಾಗೂ ಕಾಲೇಜು ಶುಲ್ಕದಲ್ಲಿ ಶೇ.50ರಷ್ಟು ಶುಲ್ಕ ವಿನಾಯಿತಿ ಹಾಗೂ 81 ರಿಂದ 120 ರ್‍ಯಾಂಕ್ ವಿಜೇತರಿಗೆ ಕಾಲೇಜು ಹಾಗೂ ಹಾಸ್ಟೆಲ್ ಪ್ರವೇಶದಲ್ಲಿ ಶೇ.75ರಷ್ಟು ಶುಲ್ಕ ವಿನಾಯಿತಿ ದೊರೆಯಲಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಈ ಎಸ್.ಬಿ.ಆರ್-ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ವರ್ಷ ಸುಮಾರು 8,000 ಸಾವಿರ ಜನ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ ಅದಕ್ಕೂ ಮೀರಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆ ಇದೆ ಎಂದು ಹೇಳಿದ ಅವರು, ಪ್ರತಿವರ್ಷ ಹತ್ತನೇ ತರಗತಿ ಪರೀಕ್ಷೆಗೂ ಮೊದಲೇ ಸಿಇಟಿ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಪರೀಕ್ಷೆ ನಂತರ ಎಸ್.ಬಿ.ಆರ್-ಸಿಇಟಿ ನಡೆಸಲು ನಿರ್ಧಾರಿಸಲಾಗಿದೆ. ಹಾಗಾಗಿ ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ.ಅಲ್ಲಮಪ್ರಭು ದೇಶಮುಖ್, ಎಸ್.ಬಿ.ಆರ್ ಪಿಯು ಕಾಲೇಜಿನ ಮೇಲ್ವಿಚಾರಕ ಡಾ.ಶ್ರೀಶೈಲ ಹೊಗಾಡೆ, ರಾಮು ಸೇರಿದಂತೆ ಅನೇಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News