ಹಿರೇಬೆಟ್ಟು ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಕ್ರಮ ಹಣ ಸಂಗ್ರಹ, ವಿದ್ಯಾರ್ಥಿಗಳಿಗೆ ದೌರ್ಜನ್ಯ: ಪೋಷಕರ ಆರೋಪ
ಉಡುಪಿ, ಜೂ.19: ಹಿರೇಬೆಟ್ಟು ಪಟ್ಟದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಎಂದು ವಸತಿ ನಿಲಯದ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ನೊಂದ ಪೋಷಕಿ, ರಕ್ಷಕ- ಶಿಕ್ಷಕ ಸಂಘದ ಸದಸ್ಯೆ ಮಾಲತಿದೇವಿ ಸಂತೆಕಟ್ಟೆ ಮಾತನಾಡಿ, ಪ್ರಸ್ತುತ ಸಂಸ್ಥೆಯಲ್ಲಿ ಒಟ್ಟು 247 ವಿದ್ಯಾರ್ಥಿಗಳಿದ್ದಾರೆ. ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದ ಶಾಲೆಯ ಪ್ರಾಂಶುಪಾಲೆ ಹಾಗೂ ದೈಹಿಕ ಶಿಕ್ಷಕಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಶಾಲೆಯಲ್ಲಿ ಆಡಳಿತಾತ್ಮ ವ್ಯವಹಾರಗಳನ್ನು ಶಾಲೆಗೆ ಸಂಬಂಧಪಡದ ಪ್ರಾಂಶುಪಾಲರ ಗಂಡನೇ ಸಂಪೂರ್ಣ ವಾಗಿ ಹತೋಟಿಯಲ್ಲಿ ಇಟ್ಟುಕೊಂಡಿದ್ದಾರೆ. ಶಾಲೆಯ ನೇಮಕಾತಿ ಸಮಯದಲ್ಲಿ ಪಡೆದುಕೊಳ್ಳುವ 500 ರೂ. ಬಗ್ಗೆ ಯಾವುದೇ ಸಮರ್ಪಕ ಉತ್ತರ ಇಲ್ಲ. ವಿದ್ಯಾರ್ಥಿಗಳಿಂದ ಪ್ರತಿ ಸಲ ಗಾರ್ಡನ್ ನಿರ್ಮಾಣಕ್ಕೆ 500, ಒಂದು ಸಾವಿರ, 2 ಸಾವಿರ ರೂ. ವಸೂಲಿ ಮಾಡಿದ್ದಾರೆ. ಇದಕ್ಕೆ ಯಾವುದಕ್ಕೂ ರಶೀದಿ ಕೊಡುವುದಿಲ್ಲ. ರಸ್ತೆ ನಿರ್ಮಾಣಕ್ಕೆಂದು 500 ರೂ. ತೆಗೆದುಕೊಂಡಿದ್ದಾರೆ. ಸಿಡಿಯಲ್ಲಿ ಸಿನಿಮಾ ತೋರಿಸಿ 250 ರೂ. ವಸೂಲಿ ಮಾಡುತ್ತಾರೆ. ಶಾಲೆಯ ಆವರಣಗೋಡೆ ನಿರ್ಮಾಣಕ್ಕೆ 2 ಸಾವಿರ ರೂ., 1 ಸಾವಿರ ರೂ. ಪಡೆದಿದ್ದಾರೆ ಎಂದು ಅವರು ಆಪಾದಿಸಿದರು.
ಸರಕಾರ ಉಚಿತವಾಗಿ ನೀಡುವ ಸಮವಸ್ತ್ರಕ್ಕೆ 650, 750, 850 ರೂ. ಪಡೆಯಲಾಗುತ್ತಿದೆ. ಪ್ರವಾಸಕ್ಕೆ ಸರಕಾರದಿಂದ ಅನುದಾನ ಬಂದಿದ್ದರೂ ಪೋಷಕರಿಂದ ಹಣ ತೆಗೆದುಕೊಳ್ಳುತ್ತಾರೆ. ಸರಕಾರ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರ ಮೀನು, ಮೊಟ್ಟೆ, ಕೋಳಿ, ತರಕಾರು, ಗೋಡಂಬಿ, ದ್ರಾಕ್ಷಿ ಸರಿಯಾಗಿ ನೀಡದೆ ಅಡುಗೆಯ ಸಾವಿತ್ರಿ, ಪ್ರಾಂಶುಪಾಲೆ ಪೂರ್ಣಿಮ, ಶಿಕ್ಷಕಿಯರಾದ ಸವಿತಾ ಗೌಡ, ಚೈತ್ರ, ನರ್ಸ್ ಸಂಧ್ಯಾ ಅವರು ಮನೆಗೆ ಸಾಗಿಸುವುದನ್ನು ಎಲ್ಲ ಮಕ್ಕಳು ನೋಡಿದ್ದಾರೆ ಎಂದು ಅವರು ದೂರಿದರು.
ಮಕ್ಕಳು, ಪೋಷಕರು ಈ ಬಗ್ಗೆ ಪ್ರಶ್ನೆ ಮಾಡಿದರೆ ಟಿಸಿ ಕೊಡುವ ಬೆದರಿಕೆ ಹಾಕುತ್ತಿದ್ದಾರೆ. ಸ್ವಚ್ಛತೆ ಕೆಲಸವನ್ನು ವಿದ್ಯಾರ್ಥಿಗಳಿಂದಲೇ ಮಾಡಿಸುವ ಮೂಲಕ ದೌರ್ಜನ್ಯ ಎಸಗುತ್ತಿದ್ದಾರೆ. ಪೋಷಕರ ಸಭೆಯನ್ನು ಸರಿಯಾಗಿ ನಡೆಸದೆ ಗುಪ್ತವಾಗಿ ನಡೆಸಿ ಅಕ್ರಮಗಳ ಬಗ್ಗೆ ಮುಚ್ಚಿಡುತ್ತಾರೆ. ಇಲ್ಲಿ 6ನೇ ತರಗತಿಗೆ ಅರ್ಹತೆಯ ಆಧಾರದ ಮೇಲೆ ದಾಖಲಾತಿ ನಡೆಯುವುದಿಲ್ಲ. ಹೊರ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಂದ ಹಣ ಪಡೆದು ಸೀಟು ನೀಡಲಾಗುತ್ತದೆ. ಎಲ್ಲ ಅಕ್ರಮಗಳಿಗೆ ಇಲಾಖೆ ಹಿರಿಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಶಾಲೆಯ ಮಾಜಿ ಕಾವಲುಗಾರ ಜಗನ್ನಾಥ್ ಆಚಾರ್ಯ ಮಾತನಾಡಿ, ನನ್ನ ವಿರುದ್ಧ ಮಕ್ಕಳನ್ನು ಎತ್ತಿ ಕಟ್ಟಿ ಪೊಕ್ಸೋ ಕಾಯಿದೆಯಡಿ ನನ್ನನ್ನು ಜೈಲಿಗೆ ಹಾಕಿಸಿದರು. ಈ ಪ್ರಕರಣ ಇತ್ತೀಚೆಗೆ ಕೋರ್ಟ್‌ನಲ್ಲಿ ಖುಲಾಸೆ ಯಾಗಿದೆ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಷಡ್ಯಂತರ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪೋಷಕರಾದ ಪ್ರಭಾಕರ್ ಶೆಟ್ಟಿ ಆತ್ರಾಡಿ, ನಿಲೇಶ್ ಬೈಲೂರು, ಜ್ಯೋತಿ ಪೆರ್ಣಂಕಿಲ ಉಪಸ್ಥಿತರಿದ್ದರು.