ಮಳೆಗಾಳಿ, ಸಿಡಿಲು ಬಡಿದು 15 ಮನೆಗಳಿಗೆ ಹಾನಿ: ಓರ್ವನಿಗೆ ಗಾಯ

Update: 2023-07-09 14:09 GMT

ಉಡುಪಿ, ಜು.9: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆ ಹಾಗೂ ಸಿಡಿಲಿನಿಂದ ಒಟ್ಟು 15 ಮನೆಗಳಿಗೆ ಹಾನಿಯಾಗಿದ್ದು, ಮನೆಯ ಛಾವಣಿ ಕುಸಿದ ಪರಿಣಾಮ ಓರ್ವ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿ-37.1ಮಿ.ಮೀ., ಬ್ರಹ್ಮಾವರ- 46.9ಮಿ.ಮೀ., ಕಾಪು-67.3ಮಿ.ಮೀ., ಕುಂದಾಪುರ-45.1ಮಿ.ಮೀ., ಬೈಂದೂರು-39.7ಮಿ.ಮೀ., ಕಾರ್ಕಳ-51.7ಮಿ.ಮೀ., ಹೆಬ್ರಿ-50.2ಮಿ.ಮೀ. ಆಗಿದ್ದು, ಜಿಲ್ಲೆಯಲ್ಲಿ ಸರಾಸರಿ 47.1ಮಿ.ಮೀ. ಮಳೆಯಾಗಿದೆ.

ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಮಂಜುನಾಥ ಅವಭ್ರತ ಎಂಬವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಕುಸಿದು ಭಾಗಶಃ ಹಾನಿ ಯಾಗಿ 100,000ರೂ. ನಷ್ಟವಾಗಿದೆ. ಈ ವೇಳೆ ಮನೆಯ ರೀಪು ಬಿದ್ದು ಮಂಜುನಾಥ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದೇ ರೀತಿ ಬೈಂದೂರು ತಾಲೂಕಿನ ನಾಲ್ಕು ಮನೆಗಳಿಗೆ ಹಾನಿಯಾಗಿ ಒಟ್ಟು 3.25ಲಕ್ಷ ರೂ. ನಷ್ಟ ಉಂಟಾಗಿದೆ.

ಕಾಪು ತಾಲೂಕಿನ ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದ್ದು, ಇದರಿಂದ ಒಟ್ಟು ಒಂದು ಲಕ್ಷ ರೂ. ಮತ್ತು ಕುಂದಾಪುರ ತಾಲೂಕಿನ ಮೂರು ಮನೆಗಳಿಗೆ ಹಾನಿಯಾಗಿ 65ಸಾವಿರ ರೂ. ಹಾಗೂ ಕಾರ್ಕಳ ತಾಲೂಕಿನ ಒಂದು ಮನೆಗಳಿಗೆ ಹಾನಿ ಉಂಟಾಗಿ 40,000ರೂ. ನಷ್ಟ ಸಂಭವಿಸಿದೆ.

ಸಿಡಿಲು ಬಡಿದು ಹಾನಿ

ಉಡುಪಿ ತಾಲೂಕಿನ ಅಲೆವೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಸಿಡಿಲು ಬಡಿದ ಪರಿಣಾಮ ಎರಡು ಮನೆಗಳಿಗೆ ಅಪಾರ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಅಲೆವೂರು ಆನಂದ ಸೇರಿಗಾರ್ ಎಂಬವ ಮನೆಗೆ ಸಿಡಿಲು ಬಡಿದು 20,000ರೂ. ಮತ್ತು ಅಲೆವೂರಿನ ಕರ್ವಾಲಿನ ಜಯಂತಿ ನಾಯ್ಕ್ ಎಂಬವರ ಅವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿ 75ಸಾವಿರ ನಷ್ಟವಾಗಿದೆ. ಸ್ಥಳೀಯ ಮುಖಂಡರಾದ ರವಿರಾಜ್ ಆಚಾರ್ಯ ಬದ್ರಿ, ಶ್ರೀಧರ್ ಪೂಜಾರಿ, ಉಮೇಶ್ ಕಾಮತ್, ಗ್ರಾಪಂ ಸದಸ್ಯ ಗುರುರಾಜ್ ಸಾಮಗ, ಕಂದಾಯ ನಿರೀಕ್ಷಕರಾದ ಉಪೇಂದ್ರ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೃಷಿ ಬೆಳೆಗೆ ಅಪಾರ ಹಾನಿ

ಕುಂದಾಪುರ ತಾಲೂಕಿನ ಹಾಲಾಡಿಯ ಸುಧಾಕರ ಶೆಟ್ಟಿ ಮತ್ತು ಹೆಬ್ರಿ ಅಂಡಾರು ಗ್ರಾಮದ ಸುರೇಶ ಸೇರ್ವೇಗಾರ ಹಾಗೂ ರಾಜಶೇಖರ ಸೇರ್ವೇ ಗಾರ ಎಂಬವರ ಕೃಷಿ ಗದ್ದಗೆ ನೀರು ತುಂಬಿ ಬೆಳೆ ಹಾನಿಯಾಗಿದ್ದು, ಇದರಿಂದ ಒಟ್ಟು 40,000ರೂ. ನಷ್ಟ ಉಂಟಾಗಿದೆ.

ವಕ್ವಾಡಿಯ ಆಶಾಲತಾ ಶೆಡ್ತಿ ಎಂಬವರ ಅಡಿಕೆ ತೋಟಕ್ಕೆ ಭಾಗಶಃ ಹಾನಿಯಾಗಿ 20,000ರೂ. ಮತ್ತು ಕುಂದಾಪುರ ತಾಲೂಕಿನ ಕೊರ್ಗಿ, ನೂಜಾಡಿ, ಕುಂದಾಬಾರಂದಾಡಿ, ವಕ್ವಾಡಿಯಲ್ಲಿ ಒಟ್ಟು ನಾಲ್ಕು ದನದ ಕೊಟ್ಟಿಗೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಟ್ಟು 75ಸಾವಿರ ರೂ. ನಷ್ಟ ಉಂಟಾಗಿದೆ

ಕೆಳಪರ್ಕಳದಲ್ಲಿ ಮುಳುಗುತ್ತಿರುವ ಕಾಲು ಸೇತುವೆ!

ಪರ್ಕಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಲಬದಿಯಲ್ಲಿ ಬಯಲು ಗದ್ದೆಯಲ್ಲಿ ಮುಂದಕ್ಕೆ ಚಲಿಸಿದಾಗ ರಾಜ ಕಾಲುವೆ ನಿರ್ಮಿಸಲಾದ ಕಾಲು ಸಂಕ ಮಳೆಯ ನೀರಿನಿಂದ ಮುಳುಗಿ ಹೋಗುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ.

ಈ ಕಾಲುಸಂಕದಲ್ಲಿ ಈ ಪರಿಸರದ ಸುಮಾರು 25 ಮನೆಯವರು ಬಳಕೆ ಮಾಡುತ್ತಿದ್ದಾರೆ. ಸಂಬಂಧಪಟ್ಟವರು ಈ ಕಡೆ ಗಮನ ಹರಿಸಿ, ಎತ್ತರದ ಘನ ವಾಹನ ಸಂಚರಿಸುವ ರೀತಿಯ ಹೊಸ ಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಪಾಯದಲ್ಲಿರುವ ಈ ಮುರುಕಲು ಸೇತುವೆಯಲ್ಲಿ ಸಮತೋಲನ ಮಾಡಿ ದಿನನಿತ್ಯ ಹೋಗಬೇಕಾದ ಪರಿಸ್ಥಿತಿ ಇದೆ. ಸ್ಥಳೀಯರು ಹಲವು ಬಾರಿ ನಗರಸಭೆಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಉಮೇಶ್ ನಾಯಕ್ ದೂರಿದರು. 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News