ಉಡುಪಿ, ಕಾಪುವಿನಲ್ಲಿ 24 ಗಂಟೆಗಳಲ್ಲಿ 24 ಸೆ.ಮೀ. ಮಳೆ: ತಗ್ಗು ಪ್ರದೇಶಗಳು ನೀರಿನಿಂದಾವೃತ
ಉಡುಪಿ, ಜು.6: ಉಡುಪಿ ಮತ್ತು ಕಾಪುಗಳಲ್ಲಿ ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಮೇಘಸ್ಫೋಟವಾದಂತೆ ಮಳೆ ಸುರಿಯಿತು. ಇಲ್ಲಿ ಬರೇ 24ಗಂಟೆಗಳ ಅಂತರದಲ್ಲಿ 24 ಸೆ.ಮೀ.ನಷ್ಟು ಮಳೆಯಾದರೆ, ಉಳಿದ ತಾಲೂಕುಗಳಲ್ಲೂ ಧಾರಾಕಾರ ಮಳೆ ಬಿದ್ದಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಾಸರಿ 19.64ಸೆ.ಮೀ. (196.4 ಮಿ.ಮೀ.) ಮಳೆಯಾದ ಬಗ್ಗೆ ಮಾಹಿತಿ ಬಂದಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕಾಪವಿನಲ್ಲಿ 242.5ಮಿ.ಮೀ., ಉಡುಪಿಯಲ್ಲಿ 235.7ಮಿ.ಮೀ ಹಾಗೂ ಬ್ರಹ್ಮಾವರದಲ್ಲಿ 206.5ಮಿ.ಮೀ ಮಳೆಯಾಗಿದೆ. ಉಳಿದಂತೆ ಕಾರ್ಕಳದಲ್ಲಿ 196.4ಮಿ.ಮೀ., ಹೆಬ್ರಿಯಲ್ಲಿ 179.7, ಕುಂದಾಪುರದಲ್ಲಿ 170.4 ಹಾಗೂ ಬೈಂದೂರಿನಲ್ಲಿ 163.0ಮಿ.ಮೀ. ಮಳೆಯಾಗಿದೆ. ಇಂದು ಸಹ ಅಪರಾಹ್ನದವರೆಗೆ ಬಿರುಸಾಗಿ ಸುರಿದ ಮಳೆ, ಸಂಜೆಯ ವೇಳೆಗೆ ವಿರಾಮ ಪಡೆದುಕೊಂಡಿದೆ.
ಇದರಿಂದಾಗಿ ಜಿಲ್ಲೆಯ ತಗ್ಗುಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದು, ಇಲ್ಲಿನ ಮನೆಗಳಿಗೂ ನೆರೆ ನೀರು ನುಗ್ಗಿದೆ. ಉಡುಪಿ ನಗರ ಹಾಗೂ ಕಾಪು ತಾಲೂಕುಗಳಲ್ಲಿ ಇದು ಹೆಚ್ಚಿನ ಕಡೆಗಳಲ್ಲಿ ಕಂಡುಬಂದಿದೆ. ಕುಂದಾಪುರ ತಾಲೂಕಿನಲ್ಲೂ ಮೂರು ಮನೆಗಳು ನೀರಿನಿಂದ ಸುತ್ತುವರಿದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 200 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.
ಜಿಲ್ಲಾಡಳಿತದಿಂದ ದೊರೆತ ಅಧಿಕೃತ ಮಾಹಿತಿಯಂತೆ ಇಂದು ಉಡುಪಿಯ ಕೃಷ್ಣ ಮಠ ಪರಿಸರ, ಕಲ್ಸಂಕ ಹಾಗೂ ಬನ್ನಂಜೆ ಪ್ರದೇಶಗಳಿಂದ 106 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಪಡುಬಿದ್ರಿ, ಪಲಿಮಾರು, ನಿಟ್ಟೂರು, ಗುಂಡಿಬೈಲು ಪ್ರದೇಶಗಳಿಂದ 33 ಮಂದಿ, ಹೆಜಮಾಡಿ, ಉಳಿಯಾರಗೋಳಿಯಿಂದ ಸುಮಾರು 21, ಕಟಪಾಡಿ ಇನ್ನಿತರ ಪ್ರದೇಶಗಳಿಂದ 20 ಮಂದಿ ಸೇರಿದಂತೆ ಒಟ್ಟು 180 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಕುಂದಾಪುರದಲ್ಲಿ 20 ಮಂದಿ: ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿ ಎರಡು ಮನೆಗಳ ಒಟ್ಟು 14 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಇವರು ತಮ್ಮ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಲು ಇಚ್ಛಿಸಿದ್ದರಿಂದ ಅಲ್ಲಿಗೆ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಶುಭಲಕ್ಷ್ಮಿ ತಿಳಿಸಿದ್ದಾರೆ.
ಅದೇ ರೀತಿ ತೆಕ್ಕಟ್ಟೆಯಲ್ಲೂ ಒಂದು ಮನೆಯ ಐದು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಇವರು ಸಹ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ ಎಂದು ಅವರು ತಿಳಿಸಿದರು. ತಾಲೂಕಿನಲ್ಲಿ ಮಳೆ ಜೋರಾಗಿ ಸುರಿದರೂ, ಅದರೊಂದಿಗೆ ಗಾಳಿ ಇಲ್ಲದ ಕಾರಣ ಹೆಚ್ಚಿನ ಅಪಾಯ ಎದುರಾಗಿಲ್ಲ. ಇಂದು ಅಪರಾಹ್ನದ ಬಳಿಕ ಮಳೆಯ ಪ್ರಮಾಣ ತಗ್ಗಿದ್ದು, ತಗ್ಗು ಪ್ರದೇಶಗಳಿಂದಲೂ ನೀರು ಹರಿದು ಹೋಗಿವೆ ಎಂದು ಅವರು ಹೇಳಿದರು.
2 ಕಡೆ ಕಾಳಜಿ ಕೇಂದ್ರ: ಸದ್ಯ ಜಿಲ್ಲೆಯ ಎರಡು ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಾಪುವಿನ ಪಡು ಎಂಪಿಸಿಎಸ್‌ನಲ್ಲಿ ಒಂದು ಹಾಗೂ ಉಡುಪಿ ನಗರ ಬನ್ನಂಜೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಕೇಂದ್ರಗಳಿದ್ದು, ಇದುವರೆಗೆ ಇಲ್ಲಿಗೆ ಯಾರೂ ಸೇರ್ಪಡೆಗೊಂಡಿಲ್ಲ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.
ಶುಕ್ರವಾರವೂ ರೆಡ್ ಅಲರ್ಟ್: ಜಿಲ್ಲೆಗೆ ಶುಕ್ರವಾರವೂ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ. ಶನಿವಾರ ಆರೆಂಜ್ ಅಲರ್ಟ್ ಇದ್ದು, ನಂತರದ ಎರಡು ದಿನಗಳಲ್ಲಿ ಯೆಲ್ಲೋ ಅಲರ್ಟ್‌ನ್ನು ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಗಂಟೆಗೆ 45ರಿಂದ 55ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಂಭವವಿದ್ದು, ಅರಬೀಸಮುದ್ರವೂ ಪ್ರಕ್ಷುಬ್ಧ ವಾಗಿರುವುದರಿಂದ ಎತ್ತರದ ಅಲೆಗಳು ಏಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ಸನ್ನದ್ಧ ಸ್ಥಿತಿಯಲ್ಲಿ ರಕ್ಷಣಾ ಪಡೆಗಳು
ಜಿಲ್ಲೆಯಲ್ಲಿ ನೆರೆಯ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಪ್ರಸ್ತುತ ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದಲ್ಲಿ ಒಟ್ಟು 9 ಬೋಟ್‌ಗಳಿವೆ. ಅಗ್ನಿಶಾಮಕ ಕಚೇರಿಗಳಾದ ಬೈಂದೂರು, ಮಲ್ಪೆ, ಕುಂದಾಪುರ, ಕಾರ್ಕಳ ಹಾಗೂ ಉಡುಪಿಗಳಲ್ಲಿ ಒಟ್ಟು 7 ಬೋಟ್‌ಗಳು ಲಭ್ಯವಿದೆ.
ಗೃಹರಕ್ಷಕ ದಳದಿಂದ ಬ್ರಹ್ಮಾವರ, ಪಡುಬಿದ್ರಿಗಳಲ್ಲಿ ತಲಾ ಒಂದು ಬೋಟ್‌ನೊಂದಿಗೆ 7 ಮಂದಿಯ ತಂಡವನ್ನು ನಿಯೋಜಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಜನರು ಉಡುಪಿ ಜಿಲ್ಲೆಯ ಕಂಟ್ರೋಲ್ ರೂಮ್ ನಂಬರ್:1077 (ಟೋಲ್‌ಫ್ರಿ) ಅಥವಾ 0820-2574802, ಜಿಲ್ಲಾ ಅಗ್ನಿಶಾಮಕ ಕಚೇರಿ: 0820-250333, ಜಿಲ್ಲಾ ಗೃಹ ರಕ್ಷಕ ದಳ ಕಚೇರಿ: 0820-2533650ಅನ್ನು ಸಂಪರ್ಕಿಸಬಹುದು.
ಗೃಹರಕ್ಷಕ ದಳದಿಂದ ಜಿಲ್ಲೆಯ ಸಮುದ್ರ ತೀರಗಳಲ್ಲಿ 10 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಸ್‌ಡಿಆರ್‌ಎಫ್‌ನ ಮಂಗಳೂರು ಕೇಂದ್ರ ಕಚೇರಿ ಯಲ್ಲಿ 60 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಎನ್‌ಡಿಆರ್‌ಎಫ್‌ನ 25 ಮಂದಿ ಸಿಬ್ಬಂದಿಗಳ ತಂಡವು ಮಂಗಳೂರು ಕೇಂದ್ರದಲ್ಲಿ ನಿಯೋಜನೆಗೊಂಡಿದೆ ಎಂದು ಜಿಲ್ಲಾಡಳಿತವು ಮಾಹಿತಿ ನೀಡಿದೆ.