ಎಸ್‌ಎಂಎಸ್ ವಿದ್ಯಾಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ಸಂದೇಶ ವೈರಲ್; ಆಡಳಿತ ಮಂಡಳಿಯಿಂದ ಸ್ಪಷ್ಟನೆ
ಉಡುಪಿ, ಜು.13: ಬ್ರಹ್ಮಾವರದ ಶತಮಾನಗಳಷ್ಟು ಇತಿಹಾಸ ಹೊಂದಿರುವ ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂಬ ತಿರುಚಿದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತಿದ್ದು, ಈ ಬಗ್ಗೆ ಬ್ರಹ್ಮಾವರದ ಓಎಸ್‌ಸಿ ಎಜ್ಯುಕೇಶನಲ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು ಇಂದು ಪತ್ರಿಕಾ ಗೋಷ್ಠಿಯ ಮೂಲಕ ಸ್ಪಷ್ಟೀಕರಣ ನೀಡಿ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ)ಯ ಪ್ರಾಂಶುಪಾಲೆ ಬಿ.ಅಭಿಲಾಷಾ ಹಂದೆ, ಎಸ್‌ಎಂಎಸ್ ಸಮೂಹ ಸಂಸ್ಥೆಗಳಲ್ಲಿ ಒಂದಾದ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ) ಜೂನ್ ಮಾಸಾಂತ್ಯದಲ್ಲಿ ನಡೆಸಿದ ಕಿರುಪರೀಕ್ಷೆ (ಯುನಿಟ್ ಟೆಸ್ಟ್)ಗೆ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆ ಇದಾಗಿದೆ. ಈ ಕಿರುಪರೀಕ್ಷೆಗೆ ಕರ್ನಾಟಕ ರಾಜ್ಯ ಪಠ್ಯಪುಸ್ತಕದ ಸಮಾಜ ವಿಜ್ಞಾನದ ಮೊದಲೆರಡು ಪಾಠಗಳನ್ನು ಆಧರಿಸಿ ಈ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕಲಿಸಿದ ಪಠ್ಯಾಂಶಗಳು ಕ್ರಿಶ್ಚಿಯಾನಿಟಿ, ಇಸ್ಲಾಮ್, ಕ್ರುಸೇಡ್ಸ್, ದ ಮಂಗೋಲ್ಸ್, ಟರ್ಕಿಸ್, ರಿನೆಸನ್ಸ್ ಎಂದವರು ವಿವರಿಸಿದರು.
ಈ ಒಂದು ತಿಂಗಳಲ್ಲಿ ಎರಡು ಪಾಠಗಳನ್ನು ಮುಗಿಸಿದ್ದ ಶಿಕ್ಷಕರು ಇದನ್ನೇ ಆಕರವಾಗಿಟ್ಟುಕೊಂಡು ಯಾವುದೇ ದುರುದ್ದೇಶವಿಲ್ಲದೇ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದ್ದರು. ಕೇಳಿದ ಪ್ರಶ್ನೆಗಳೆಲ್ಲವೂ ಈ ಪಠ್ಯಾಂಶಗಳನ್ನು ಕುರಿತೇ ಇತ್ತು ಎಂದವರು ಸ್ಪಷ್ಟಡಿಸಿದರು. ಇದರಲ್ಲಿ ಮುಂದಿನ ಪಾಠಗಳು ಹಿಂದು ಧರ್ಮ, ದಾಸ ಪರಂಪರೆಯ ಕುರಿತು ಇದ್ದು, ಮುಂದಿನ ಕಿರುಪರೀಕ್ಷೆಗೆ ಅವುಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ ಎಂದರು.
ಆದರೆ ಇವ್ಯಾವುದರ ಹಿನ್ನೆಲೆಯನ್ನೇ ತಿಳಿದುಕೊಳ್ಳುವ ಪ್ರಯತ್ನ ಮಾಡದೇ, ಪ್ರಶ್ನೆ ಪತ್ರಿಕೆಯ ವಿಷಯಕ್ಕೂ ಸಂಸ್ಥೆ ನಡೆಸುತ್ತಿರುವ ಆಡಳಿತ ಮಂಡಳಿಯ ಕೋಮಿಗೂ ಸಂಬಂಧ ಕಲ್ಪಿಸಿ, ನಮ್ಮ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣ ಕೊಡ ಲಾಗುತ್ತಿದೆ ಎಂಬ ಅರ್ಥಬರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಯಿತು. ಇದು ಸತ್ಯಕ್ಕೆ, ವಾಸ್ತವ್ಯಕ್ಕೆ ಸಂಪೂರ್ಣ ದೂರವಾಗಿದ್ದು, ಇಲ್ಲಿ ಸತ್ಯಾಂಶವನ್ನು ತಿರುಚಿರುವುದು ಸುಷ್ಪಷ್ಟ ಎಂದರು.
ಕಳೆದ ನೂರಾರು ವರ್ಷಗಳಿಂದ ಬ್ರಹ್ಮಾವರದಲ್ಲಿ ಶೈಕ್ಷಣಿಕ ಸೇವೆ ನೀಡುತ್ತಿರುವ ನಮ್ಮ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಖ್ಯೆಯೇ ಒಂದು ಲಕ್ಷ ಮೀರಿದೆ. ಇಲ್ಲಿ ವಿವಿಧ ಧರ್ಮ, ವರ್ಗದ ಮಕ್ಕಳು ಕಲಿಯುತಿದ್ದು, ಬೇರೆ ಬೇರೆ ವರ್ಗ, ಮತ, ಕೋಮಿನ ಐನೂರಕ್ಕೂ ಅಧಿಕ ಸಿಬ್ಬಂದಿಗಳು ದುಡಿಯು ತಿದ್ದಾರೆ. ಸಂಸ್ಥೆ ದೇಶದ ಸಂವಿಧಾನಕ್ಕೆ ಬದ್ಧವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಗದಿ ಪಡಿಸಿದ ಪಠ್ಯಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆಯೇ ಹೊರತು ಇಲ್ಲಿ ಯಾವ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತಿಲ್ಲ ಎಂದು ಅಭಿಲಾಷಾ ಹಂದೆ ತಿಳಿಸಿದರು.
ಎಸ್‌ಎಂಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಧರ್ಮದ ಮಕ್ಕಳಿಗೂ ಅವರವರ ಅಭಿವ್ಯಕ್ತಿಗೆ ಮುಕ್ತ ವಾತಾವರಣ ಇದ್ದು, ಧರ್ಮನಿರಪೇಕ್ಷ, ಕಾಸ್ಮೋಪೊಲಿಟಿನ್ ಸಂಸ್ಕೃತಿಯನ್ನು ನಾವು ಎತ್ತಿ ಹಿಡಿದಿದ್ದೇವೆ. ಇಲ್ಲಿ ಪ್ರತಿ ದಿನವೂ ಯೋಗ, ಭರತನಾಟ್ಯ, ಯಕ್ಷಗಾನ ಮುಂತಾದ ಭಾರತೀಯ ಸಾಂಸ್ಕೃತಿಕ ಕಲೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿದೆ. ಇಂಥ ಸಂಸ್ಥೆಗಳ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ಅಪಪ್ರಚಾರ ಮಾಡಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ನಡೆಸುತ್ತಿರುವ ಪ್ರಯತ್ನವನ್ನು ಖಂಡಿಸುವುದಾಗಿ ಅವರು ತಿಳಿಸಿದರು.
ಈ ಕುರಿತು ಇಂದು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಓಎಸ್‌ಸಿ ಎಜ್ಯುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅಲೆನ್ ರೋಹನ್ ವಾಝ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವತ್ಸಲ ಶೆಟ್ಟಿ, ಎಸ್‌ಎಂಎಸ್ ಪಿಯು ಕಾಲೇಜು ಪ್ರಾಂಶುಪಾಲರಾದ ಐವನ್ ಡೊನಾಲ್ಟ್ ಸುವಾರಿಸ್ ಹಾಗೂ ಅಲ್ವಾರಿಸ್ ಡಿಸಿಲ್ವ ಉಪಸ್ಥಿತರಿದ್ದರು.