ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ : ಪೊಲೀಸ್ ಆಯುಕ್ತ ಕುಲ್‌ದೀಪ್‌ ಕುಮಾರ್ ಜೈನ್

Update: 2023-07-01 12:41 GMT

ಮಂಗಳೂರು, ಜು.1: ನಗರದಲ್ಲಿ ಈಗಾಗಲೇ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಜೈನ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಟ್ರಾಫಿಕ್ ಸಮಸ್ಯೆಗಳು ಮತ್ತು ಖಾಸಗಿ ಬಸ್‌ಗಳು ನಿಯಮಗಳನ್ನು ಪಾಲಿಸದ ವಿಚಾರಗಳ ಬಗ್ಗೆ ಹಲವಾರು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುರತ್ಕಲ್‌ನ ಕೃಷ್ಣಾಪುರದ ವ್ಯಕ್ತಿಯೊಬ್ಬರು ಅಪ್ರಾಪ್ತ ವಯಸ್ಕರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸುತ್ತಿದ್ದಾರೆ ಮತ್ತು ಹಲವಾರು ಟ್ರಿಪಲ್ ರೈಡಿಂಗ್ ನಿದರ್ಶನಗಳಿವೆ ಎಂದು ದೂರಿದರು.

ಅಪ್ರಾಪ್ತರ ವಿಚಾರದಲ್ಲಿ ಹೆಚ್ಚುವರಿ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಕಮಿಷನರ್ ತಿಳಿಸಿದರು.

ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗಾಗಿ ಮೀಸಲಿಟ್ಟ ಆಸನಗಳಲ್ಲಿ ಸದಾ ಯುವಕರೇ ಕುಳಿತುಕೊಳ್ಳುತ್ತಾರೆ. ಹಿರಿಯ ನಾಗರಿಕರಿಗೆ ಸೀಟುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಹಿರಿಯ ನಾಗರಿಕರೊಬ್ಬರು ಕಮಿಷನರ್ ಗಮನ ಸೆಳೆದರು. ಈ ಬಗ್ಗೆ ಪರಿಶೀಲಿಸುವುದಾಗಿ ಪೊಲೀಸ್ ಆಯುಕ್ತರು ಭರವಸೆ ನೀಡಿದರು.

ಖಾಸಗಿ ಬಸ್‌ಗಳಲ್ಲಿ ಬಳಸುವ ಹಾರ್ನ್‌ಗಳ ಬಗ್ಗೆ ಮತ್ತೊಬ್ಬ ಕರೆ ಮಾಡಿದವರು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್‌ ಸಿಟಿ ಬಸ್‌ಗಳಲ್ಲಿ ಇಂತಹ ಹಾರ್ನ್‌ಗಳನ್ನು ತೆಗೆಯುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ. ಯುವಕರು ವಾಹನಗಳಲ್ಲಿ ಸದ್ದು ಮಾಡುವ ಸೈಲೆನ್ಸರ್‌ಗಳನ್ನು ಬಳಸುತ್ತಿರುವ ಬಗ್ಗೆ ಹಲವು ಮಂದಿ ದೂರಿದ್ದಾರೆ. ಇಂತಹ ಅಪರಾಧಗಳನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ರಾತ್ರಿಯಲ್ಲಿ ಹೈ ಬೀಮ್ ಹೆಡ್‌ಲೈಟ್‌ಗಳನ್ನು ಬಳಸುವ ವಾಹನಗಳ ಬಗ್ಗೆ ಕೆಲವರು ದೂರು ನೀಡಿದರೆ, ಕೆಲವರು ಪೊಲೀಸ್ ಠಾಣೆಗಳ ಬಳಿ ನಿಲ್ಲಿಸಿರುವ ಹಳೆಯ ವಾಹನಗಳನ್ನು ತೆರವುಗೊಳಿಸುವಂತೆ ಪೊಲೀಸರಿಗೆ ಮನವಿ ಮಾಡಿದರು.

ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆದು ಹಳೆಯ ವಾಹನಗಳನ್ನು ತೆರವುಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್, ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News