ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪ; ತನಿಖಾಧಿಕಾರಿಯೇ ಪರಿಹಾರ ಧನ ಪಾವತಿಸಲು ನ್ಯಾಯಾಲಯ ಆದೇಶ

Update: 2023-06-23 04:45 GMT

ಮಂಗಳೂರು, ಜೂ.22: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ್ದ ಆರೋಪ ಎದುರಿಸುತ್ತಿರುವ ತನಿಖಾಧಿಕಾರಿಯೇ 5 ಲಕ್ಷ ರೂ. ಪರಿಹಾರವನ್ನು ಆರೋಪಿಗಳೆಂದು ಪರಿಗಣಿಸಲಾಗಿದ್ದ ಇಬ್ಬರಿಗೆ ಪಾವತಿಸಬೇಕು ಎಂದು ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

ಬಲವಂತವಾಗಿ ಭ್ರೂಣ ಹತ್ಯೆ ಮಾಡಿಸಿದ್ದ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಬಾಲಕಿಯು ನೀಡಿದ್ದ ಹೇಳಿಕೆಯ ಆಧಾರದಲ್ಲಿ ನಗರದ ಮಹಿಳಾ ಠಾಣೆಯಲ್ಲಿ 2021ರ ಫೆಬ್ರವರಿಯಲ್ಲಿ ಕಾರ್ಮಿಕನೊಬ್ಬನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಕೆಲವು ದಿನಗಳ ಬಳಿಕ ತನ್ನ ಹೇಳಿಕೆಯನ್ನು ಹಿಂಪಡೆದಿದ್ದ ಬಾಲಕಿಯು ತನಗೆ ಇನ್ನೊಬ್ಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಳು. 2022ರ ಡಿಸೆಂಬರ್‌ನಲ್ಲಿ ನಗರದ ಮಹಿಳಾ ಠಾಣೆಯ ಎಸ್ಸೈ ಶ್ರೀಕಲಾ ಬಳಿ ಮತ್ತೆ ಹೇಳಿಕೆ ನೀಡಿದ್ದ ಈ ಬಾಲಕಿಯು ‘ಸ್ವತಃ ತಂದೆ ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಳು.

ವಿಚಾರಣೆಯ ವೇಳೆ ‘ತನಿಖಾ ವರದಿಯು ಕೈಸೇರುವ ಮುನ್ನವೇ ಮಹಿಳಾ ಠಾಣೆಯ ನಿರೀಕ್ಷಕ ಲೋಕೇಶ್ ಆರೋಪ ಪಟ್ಟಿಯಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿರುವುದು ತನಿಖೆಯ ಗಂಭೀರ ಲೋಪ’ ಎಂದು ನ್ಯಾಯಾಧೀಶರು ಪರಿಗಣಿಸಿದ್ದಾರೆ.

ಸಂತ್ರಸ್ತೆ ಮೊದಲು ಉಲ್ಲೇಖಿಸಿದ್ದ ಆರೋಪಿಯ ಹೆಸರನ್ನು ತನಿಖಾಧಿಕಾರಿ ಲೋಕೇಶ್ ಕಡೆಗಣಿಸಿದ್ದಾರೆ. ಆ ಆರೋಪಿಯ ರಕ್ತದ ಮಾದರಿಯನ್ನೂ ಸಂಗ್ರಹಿಸಿಲ್ಲ. ತನಿಖಾಧಿಕಾರಿಯು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿರು ವುದು ಇದರಿಂದ ಸ್ಪಷ್ಟವಾಗುತ್ತದೆ. ಪ್ರಕರಣದ ವಿಚಾರಣೆ ಮುಗಿಯುವ ಕೊನೆಯ ಹಂತದಲ್ಲಿ ಆರೋಪಿಗಳ ವಂಶವಾಹಿಯ ತಪಾಸಣಾ ವರದಿಯು ನ್ಯಾಯಾಲಯಕ್ಕೆ ತಲುಪಿದೆ. ವಂಶವಾಹಿ ತಜ್ಞರ ಪ್ರಕಾರ ಈ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರು ಆರೋಪಿಗಳೂ (ಸಂತ್ರಸ್ತೆಯ ತಂದೆಯೂ ಸೇರಿ) ಭ್ರೂಣದ ಜೈವಿಕ ತಂದೆ ಅಲ್ಲ ಎಂದು ತಿಳಿದು ಬಂದಿದೆ.

ಸಂತ್ರಸ್ತೆಯ ತಿರುಚಿದ ಹೇಳಿಕೆಯ ಆಧಾರದಲ್ಲಿ ತನಿಖಾಧಿಕಾರಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ನೈಜ ಹಾಗೂ ಸಂಭಾವ್ಯ ತಪ್ಪಿತಸ್ಥರನ್ನು ರಕ್ಷಿಸುವ ಸಲುವಾಗಿ ಅಮಾಯಕರ ಮೇಲೆ ಉಂಟಾಗುವ ದುಷ್ಪರಿಣಾಮಕ್ಕೆ ತನಿಖಾಧಿಕಾರಿ ಮತ್ತವರ ತಂಡವನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ ತನಿಖಾಧಿಕಾರಿ ಮತ್ತವರ ತಂಡವು ಸಂತ್ರಸ್ತೆಯ ತಂದೆಗೆ 4 ಲಕ್ಷ ರೂ. ಹಾಗೂ ಆರೋಪಿ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿಗೆ 1 ಲಕ್ಷ ರೂ.ವನ್ನು 40 ದಿನಗಳ ಒಳಗೆ ಪಾವತಿಸಬೇಕು’ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

‘ತನಿಖೆಯ ಲೋಪಗಳಿಗೆ, ದಾಖಲೆಗಳನ್ನು ತಿರುಚಿರುವುದಕ್ಕೆ, ಹುದ್ದೆ ಮತ್ತು ಅಧಿಕಾರ ದುರ್ಬಳಕೆಗೆ ತನಿಖಾಧಿ ಕಾರಿ ಮತ್ತವರ ತಂಡವೇ ಹೊಣೆ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಧೀಶರು, ಆದೇಶದ ಪ್ರತಿಯನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಮಂಗಳೂರು ಪೊಲೀಸ್ ಕಮಿಷನರ್‌ಗೆ ಕಳುಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಯಾವುದೇ ಪ್ರಕರಣದಲ್ಲಿ 90 ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕೆಂಬ ನಿಯಮವಿದೆ. ಆದರೆ ಸಂತ್ರಸ್ತೆ ಹೇಳಿಕೆ ಬದಲು ಮಾಡಿದ ಕಾರಣ ಆರೋಪಿಗಳ ಡಿಎನ್‌ಎ ವರದಿ ಬರಲು ವಿಳಂಬವಾಗಿತ್ತು. ನಾವು 90 ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದೆವು. ನ್ಯಾಯಾಲಯ ಈಗ ನೀಡಿರುವ ತೀರ್ಪಿನ ಬಗ್ಗೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಪ್ರಕರಣದ ತನಿಖಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News