ದ.ಕ. ಜಿಲ್ಲೆಯಲ್ಲಿ 52 ಗ್ರಾಮ ಒನ್ ತೆರೆಯಲು ಅರ್ಜಿ ಆಹ್ವಾನ

Update: 2023-06-30 16:00 GMT

ಮಂಗಳೂರು,ಜೂ.30: ಸರಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಸರಕಾರದ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ‘ಗ್ರಾಮ ಒನ್’ ಅನ್ನು ‘ಸೇವಾ ಸಿಂಧು’ ಯೋಜನೆಯಡಿ ರೂಪಿಸಲಾಗಿದೆ. ಈ ಯೋಜನೆಯಲ್ಲಿ 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಅರ್ಜಿಗಳನ್ನು ಸ್ವೀಕರಿಸಲಾಗುವುದು.

ದ.ಕ. ಜಿಲ್ಲೆಯ 223 ಗ್ರಾಪಂಗಳಲ್ಲಿ 304 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಬೇಕಾಗಿದೆ. ಈ ಪೈಕಿ 252 ಕೇಂದ್ರಗಳನ್ನು ತೆರೆಯಲಾಗಿದೆ. ಬಾಕಿ ಇರುವ 52 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಬೇಕಾಗಿದೆ. ಹಾಗಾಗಿ ಖಾಲಿ ಇರುವ ಗ್ರಾಪಂಗಳಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಂಚೈಸಿ ಅರ್ಜಿದಾರರು ಡಿಪ್ಲೊಮಾ ಐಟಿಐ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಥವಾ ತಾಂತ್ರಿಕ ವಿಭಾಗದಲ್ಲಿ ಪರಿಣತಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿದಾರರು ಸ್ವಂತ ಅಥವಾ ಬಾಡಿಗೆ ಕಟ್ಟಡ ಹೊಂದಿರಬೇಕು ಅಥವಾ ಟೈಲ್ಸ್, ಗ್ರಾನೈಟ್ ಫ್ಲೋರ್, ಆರ್‌ಸಿಸಿ ಛಾವಣಿ ಇತ್ಯಾದಿ ಯಾವುದೇ ನೀರು ಸೋರಿಕೆಯಾಗದ ಕಟ್ಟಡಗಳಲ್ಲಿ ಗ್ರಾಮ ಒನ್ ಕೇಂದ್ರವನ್ನು ತೆರೆಯಲು ತಯಾರಾಗಿರಬೇಕು. ಆಧಾರ್ ಸರ್ಟಿಫಿಕೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರೆ ಉತ್ತಮ. ಗ್ರಾಪಂ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರಿಗೆ ವಿಕಲಚೇತನರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಅರ್ಜಿಯನ್ನು ವೆಬ್‌ಸೈಟ್ ಮೂಲಕ ಜುಲೈ 7ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 080-69008800/49203888ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News