ಬಕ್ರೀದ್ ಹಬ್ಬದ ಸಂದರ್ಭ ಗೋಕಳ್ಳತನ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು: ಶಾಸಕ ಭರತ್ ಶೆಟ್ಟಿ

Update: 2023-06-25 14:14 GMT

ಸುರತ್ಕಲ್, ಜೂ.25: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಕಳ್ಳತನ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ವಿಫಲವಾದರೆ ಜನರೇ ಕಾನೂನು ಕೈಗೆತ್ತಿಕೊಳ್ಳುವ ಪ್ರಮೇಯ ಎದುರಾಗಿ ಕಾನೂನು ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಮಂಗಳೂರು ನಗರ ಉತ್ತರ ಶಾಸಕ ಭರತ್ ಶೆಟ್ಟಿ  ಸರಕಾರ ಮತ್ತು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಕ್ರೀದ್ ಹಬ್ಬದ ಸಂದರ್ಭ ಕೆಲವೊಂದು ಸಮಾಜ ಘಾತುಕ ಶಕ್ತಿಗಳಿಂದ ಗೋವುಗಳ ಕಳ್ಳತನ, ಸಾಗಾಟ, ಗೋ ಹತ್ಯೆ ಮಾಡಿ ಹಣಗಳಿಸಲು ದಂಧೆಯಾಗಿ ಬದಲಾಗುವ ಸಾಧ್ಯತೆಯಿದೆ. ಇದನ್ನು ತಡೆಯಲು ಬಿಜೆಪಿ ಸರಕಾರ ತಂದ ಆಸ್ತಿ ಮುಟ್ಟುಗೋಲು ಕಾನೂನು ಈಗಲೂ ಊರ್ಜಿತದಲ್ಲಿದೆ. ಈ ಕಾನೂನಿನಂತೆ ನಿಗಾ ವಹಿಸಬೇಕು. ವಿಫಲವಾದರೆ ಜನರೇ ಕಾನೂನು ಕೈಗೆತ್ತಿಕೊಳ್ಳುವ ಪ್ರಮೇಯ ಎದುರಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಅಕ್ರಮಗಳ ವಿರುದ್ಧ ನನ್ನ ಕ್ಷೇತ್ರದಲ್ಲಿ ಆಸ್ತಿ ಮುಟ್ಟುಗೋಲು ಪ್ರಕರಣ ದಾಖಲಿಸಿದ್ದರಿಂದ ಬಹುತೇಕ ಅಕ್ರಮ ನಿಲ್ಲಿಸಲಾಗಿತ್ತು. ಗೋಕಳ್ಳತನ, ಅಕ್ರಮ ಗೋಹತ್ಯೆಯ ಮೂಲಕ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮ ಜರಗಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ಗೋ ಹತ್ಯೆಗೆ ಪ್ರೋತ್ಸಾಹ ಕೊಡುವಂತೆ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಗೋ ಕಳ್ಳತನ, ಅನಧಿಕೃತ ಗೋ ಹತ್ಯೆ ಹೆಚ್ಚಾದರೆ ಅದಕ್ಕೆ ಸಚಿವರದ್ದೇ ಕುಮ್ಮಕ್ಕು ಕಾರಣ ಎಂದರು.

ಗೋವು ಹಿಂದು ಸಮಾಜ ಪೂಜನೀಯ ಭಾವನೆಯಿಂದ ನೋಡುತ್ತದೆ ಎಂಬ ಬಗ್ಗೆ ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ದ.ಕ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ‌ ದೃಷ್ಟಿಯಿಂದ ಅಕ್ರಮ ಗೋವಧೆ, ಅಕ್ರಮ ಗೋಹತ್ಯೆ ತಡೆಯಲು ಬಿಜೆಪಿ ತಂದ ಕಾನೂನನ್ನು ಈಗಿನ ಸರಕಾರ ಮುಂದುವರಿಸಬೇಕೆಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News