ಬಜ್ಪೆ: ಬಿಜೆಪಿ ಕಾರ್ಯಕರ್ತನಿಂದ ದಲಿತ ಯುವತಿಗೆ ಜಾತಿನಿಂದನೆ ಆರೋಪ; ಪ್ರಕರಣ ದಾಖಲು

Update: 2023-07-11 14:51 GMT

ಬಜ್ಪೆ, ಜು.11: ಬಿಜೆಪಿ ಕಾರ್ಯಕರ್ತನೋರ್ವ ದಲಿತ ಯುವತಿಗೆ ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾದ ಘಟನೆ ಬಜ್ಪೆ‌ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.

ಘಟನೆಗೆ ಸಂಬಂಧಿಸಿ ಆರೋಪಿ ಸುದರ್ಶನ್ ಎಂಬಾತನ ವಿರುದ್ಧ ಯುವತಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪೊಲೀಸರು ಆರೋಪಿಯ ಜೊತೆ ಸೇರಿಕೊಂಡು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದು, ಠಾಣೆಗೆ ಬಂದಿದ್ದ ಆರೋಪಿ ಸುದರ್ಶನ್ ನನ್ನು ಪೊಲೀಸ್ ರಕ್ಷಣೆಯಲ್ಲೇ ಪರಾರಿಯಾಗಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಬೀಮ್ ಸೇನೆಯ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ಆರೋಪಿಯನ್ನು ಬಂಧಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ಧರಣಿ ಆರಂಭಿಸಿದ್ದರು. ಆರೋಪಿಯ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ‌ ಮುಖಂಡರು ಧರಣಿ ಮುಂದುವರಿಸಿದ ಪರಿಣಾಮ ಮಂಗಳವಾರ ಬೆಳಗ್ಗೆ ಪೊಲೀಸ್ ಆಯುಕ್ತರು ಬಜ್ಪೆ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಧರಣಿ ನಿತರರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮೂರು ದಿನಗಳ ಒಳಗಾಗಿ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದುಕೊಂಡರು ಎಂದು ತಿಳಿದು ಬಂದಿದೆ.

ಬಜ್ಪೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಲಿತ ಕಾಲನಿಯಲ್ಲಿ ನೀರಿನ ಸಮಸ್ಯೆಯ ಕುರಿತು ಅದೇ ವಾರ್ಡ್ ನ ಯುವತಿ ವಾರ್ಡ್ ಸದಸ್ಯೆ ಸವಿತಾ ಎಂಬವರಿಗೆ ದೂರವಾಣಿ‌ ಮೂಲಕ ತಿಳಿಸಿದ್ದರು. ಸವಿತಾ ಯುವತಿಗೆ ಮನಬಂದಂತೆ ಬೈದು ಬಳಿಕ ಈಕೆಯ ಮೊಬೈಲ್‌ ನಂಬರ್ ನ್ನು ಆರೋಪಿ ಸುದರ್ಶನ್ ಎಂಬಾತನಿಗೆ ನೀಡಿ ಆತನ ಜೊತೆ ಕರೆ ಮಾಡಿಸಿದ್ದರು.

ಯುವತಿಗೆ ಕರೆ ಮಾಡಿದ್ದ ಆರೋಪಿಯು ಯುವತಿಯ ಜೊತೆ ಅಸಭ್ಯವಾಗಿ ಮಾತನಾಡಿದ್ದಲ್ಲದೆ, ಜಾತಿ ನಿಂದನೆ ಗೈದು ಅವಮಾನಿಸಿದ್ದಾನೆ. ಈ ಕುರಿತು ದೂರು ನೀಡುವ ಸಂದರ್ಭ ಆರೋಪಿ ಪೊಲೀಸ್ ಠಾಣೆಯಲ್ಲೇ ಇದ್ದು, ಪೊಲೀಸರೇ ಆತನನ್ನು ಕಳುಹಿಸಿ ಕೊಟ್ಟಿದ್ದಾರೆ ಎಂದು ಪ್ರತಿಭಟನಕಾರರು ದೂರಿದ್ದಾರೆ.

"ಆರೋಪಿ ಸುದರ್ಶನ್ ಬಿಜೆಪಿ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತ್ ಅಭ್ಯರ್ಥಿ. ಬಿಜೆಪಿ ಪಕ್ಷದವರ ಒತ್ತಡಕ್ಕೆ ಮಣಿದು ಪೊಲೀಸರು ಆತ ಠಾಣೆಗೆ ಬಂದಿದ್ದವನನ್ನೂ ಬಿಟ್ಟು ಕಳುಹಿಸಿದ್ದಾರೆ. ಬಿಜೆಪಿಯ ಮುಖಂಡರೇ ಆತನನ್ನು ಠಾಣೆಯಿಂದ ಕರೆದುಕೊಂಡು ಹೋಗಿದ್ದಾರೆ. ಇದು ನಮಗೆ ನೋವುಂಟು‌ಮಾಡಿದೆ". - ಚರಣ್ ಕುಮಾರ್, ಸಂತ್ರಸ್ತ ಯುವತಿಯ ಅಣ್ಣ

ಘಟನೆಗೆ ಸಂಬಂಧಿಸಿ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತ ದಲಿತ ಯುವತಿ ಮತ್ತು ಕುಟುಂಬದ ಜೊತೆ ಮಾತುಕತೆ ನಡೆಸಿದ ಬಳಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲ್ ದೀಪ್‌ ಕುಮಾರ್‌ ಆರ್‌. ಜೈನ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News