ಬಂಟ್ವಾಳ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ

Update: 2023-07-13 17:28 GMT

ಬಂಟ್ವಾಳ : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ -1(ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಗೋಳ್ತಮಜಲುವಿನ ಸತೀಶ್ ಕುಲಾಲ್ ಶಿಕ್ಷೆಗೊಳಗಾದ ಆರೋಪಿ.

2019 ರ ಆ. 30 ರಂದು ಸಂಜೆ ಬಾಲಕಿಯು ವಿಟ್ಲದಿಂದ ಬಸ್‌ನಲ್ಲಿ ಪ್ರಯಾಣಿಸಿ ಕೆದುವಾರು ಬಸ್ ತಂಗುದಾಣದ ಬಳಿ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಬಸ್ ನಿಂದ ಇಳಿದು ಬಂದ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಬಾಲಕಿ ಕಿರುಚಿಕೊಂಡಾಗ ವ್ಯಕ್ತಿಯೊಬ್ಬರು ಬಂದು ಪ್ರಶ್ನಿಸಿದಕ್ಕೆ ಆರೋಪಿಯು ವ್ಯಕ್ತಿಗೆ ಬೆದರಿಗೆ ಹಾಕಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಆರೋಪಿಗೆ ಪೊಕ್ಸೊ ಕಲಂ 8 ರಡಿ 3 ವರ್ಷ ಸಜೆ, 10,000 ರೂ. ದಂಡ, ದಂಡ ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಸಜೆ, ಐಪಿಸಿ ಕಲಂ 354ರಡಿ 1 ವರ್ಷ ಸಜೆ, 5,000 ರೂ.ದಂಡ, ದಂಡ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚುವರಿ ಸಜೆ, ಐಪಿಸಿ ಕಲಂ 506ರ ಅಡಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಬಾಲಕಿಗೆ 1 ಲ.ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News