ಭಟ್ಕಳ: ರಾಬಿತಾ ಸೂಸೈಟಿಯಿಂದ ಸಚಿವ ಮಾಂಕಾಳ್ ವೈದ್ಯರಿಗೆ ಸನ್ಮಾನ

Update: 2023-07-09 17:31 GMT

ಭಟ್ಕಳ: ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರ್ ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ಎಸ್. ವೈದ್ಯರನ್ನು ರವಿವಾರ ರಾಬಿತಾ ಸೂಸೈಟಿ ವತಿಯಿಂದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಿವಾಸಿ ಉದ್ಯಮಿ ಅತಿಕುರ‍್ರಹ್ಮಾನ್ ಮುನಿರಿ ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು, ರಬಿತಾ ಸೊಸೈಟಿ ಭಟ್ಕಳ (ಅನಿವಾಸಿ ಭಾರತೀಯರ ಸಂಘ) ಪರವಾಗಿ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಅಮೋಘ ಗೆಲುವಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅತಿ ಹೆಚ್ಚು ಮತಗಳ ಅಂತರದಿಂದ ನಿಮ್ಮ ಗಮನಾರ್ಹ ಗೆಲುವು ಸಾರ್ವಜನಿಕ ಸೇವೆಗೆ ನಿಮ್ಮ ಸಮರ್ಪಣೆ ಮತ್ತು ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನಿಮ್ಮ ಯಶಸ್ಸಿನಿಂದ ಭಟ್ಕಳದ ಜನತೆ ಹರ್ಷಗೊಂಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿ ಭಟ್ಕಳ ಸಮುದಾಯವೂ ಅದರ ಎರಡು ಪಟ್ಟು ಸಂತಸ ವ್ಯಕ್ತಪಡಿಸಿದೆ ಎಂದರು.

ನಗರದ ಕೆಲವು ಪ್ರಮುಖ ಸಮಸ್ಯೆಗಳಾದ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ನಗರದ ಒಳಚರಂಡಿ ವ್ಯವಸ್ಥೆ, ಕಲುಷಿತಗೊಳ್ಳುತ್ತಿರುವ ಕುಡಿಯುವ ನೀರಿನ ಬಾವಿಗಳು, ಮೀನು ಮಾರುಕಟ್ಟೆ ಸ್ಥಳಾಂತರ, ಈದ್ಗಾ ಮುಂಭಾಗದಲ್ಲಿರುವ ಗೂಡಂಗಡಿ ತೆರವು, ಹೇಬಳೆ ಪಂಚಾಯತ್ ವ್ಯಾಪ್ತಿಯ ಯಲ್ಲಿ ತ್ಯಾಜ್ಯ ವಿಲೆವಾರಿ ಘಟಕಕ್ಕೆ ಭೂಮಿ ಮಂಜೂರಿ, ಸುಸಜ್ಜಿತ ಕ್ರೀಡಾ ಮೈದಾನ, ಭಟ್ಕಳ ತಾಲೂಕಿನಲ್ಲಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ನಿರ್ಮಾಣ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದ ಮುನೀರಿ, ಇವುಗಳನ್ನು ಈಡೇರಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.

ಅಂಜುಮನ್ ಉಪಾಧ್ಯಕ್ಷ ಸಾದಿಕ್ ಪಿಲ್ಲೂರು, ರಾಬಿತಾ ಸಂಸ್ಥೆಯ ಎಸ್.ಜೆ. ಹಾಶಿಮ್, ಹಬೀಬುಲ್ಲಾ ಮೊಹತೆಶಮ್, ಮುಬೀನ್ ದಿಲ್ದಾರ್, ಇದ್ರೀಸ್ ಸಿದ್ದಿಬಾಪ, ತಾಹಿರ್ ಕಾಝಿಯಾ ಅಬ್ದುಸ್ಸಮಿ ಕೋಲಾ, ಫಝಲುರ‍್ರಹ್ಮಾನ್ ಮುನಿರಿ, ಫಾಯಿಖ್ ಉದ್ಯಾವರ್ ಮತ್ತಿತರರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News