ಭಟ್ಕಳ: ಭಾರೀ ಮಳೆಯಿಂದ ಮೂಲಸೌಕರ್ಯಗಳಿಗೆ ಹಾನಿ; ಜಲಾವೃತಗೊಂಡ ತಗ್ಗು ಪ್ರದೇಶಗಳು

Update: 2023-07-05 13:33 GMT

ಭಟ್ಕಳ: ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸುರಿದ ಭಾರೀ ಮಳೆಯು ಸಾರ್ವಜನಿಕರಿಗೆ ಗಮನಾರ್ಹ ತೊಂದರೆಗಳನ್ನು ಉಂಟು ಮಾಡಿದೆ. ಮಂಗಳವಾರ ಮತ್ತು ಬುಧವಾರದಂದು ಬಿದ್ದ ಮಳೆಯಿಂದ 26 ವಿದ್ಯುತ್ ಕಂಬಗಳು ಹಾಗೂ 4 ಟ್ರಾನ್ಸ್‌ಫಾರ್ಮರ್‌ಗಳು ಹಾನಿ ಗೊಂಡಿದ್ದು, ಅಂದಾಜು ರೂ. ೩.೬೦ಲಕ್ಷ ಹಾನಿ ಸಂಭವಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರಿ ಗಾಳಿ ಮಳೆ ಶುರುವಾಗಿರುವುರಿಂದ ಸಾರ್ವಜನಿಕರು ವಿದ್ಯುತ್ ಕಂಬಗಳು ಲೈನ್ ಗಳು ಮರಗಳು ಇರುವಲ್ಲಿ ಕೆಳಗಡೆ ನಿಲ್ಲದಂತೆ ನೋಡಿಕೊಳ್ಳಿ. ವಿದ್ಯುತ್ ಕಂಬಗಳು ಮತ್ತು ವಾಯರ್ ಗಳು ತುಂಡಾಗಿರುವುನ್ನು ತಕ್ಷಣ ಸಂಬಂಧಪಟ್ಟ ಶಾಖಾಧಿಕಾರಿಗಳಿಗೆ ಮತ್ತು ಲೈನ್ ಮೆನ್ ಅಥವಾ 1912 ಕೂಡಲೇ ಸಂಪರ್ಕಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಎರಡು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಜನಜೀವನಕ್ಕೆ ಅಪಾಯ ತಂದೊಡ್ಡಿದೆ. ರಸ್ತೆಗಳು ಹದಗೆಟ್ಟಿದ್ದು, ಒಳಚರಂಡಿ ಪೈಪ್ ಮಣ್ಣಿನಲ್ಲಿ ಮುಚ್ಚಿಹೋಗಿದ್ದು ವಾಹನಗಳು ಸಿಲುಕಿಕೊಳ್ಳುವಂತೆ ಮಾಡಿದೆ. ಐಆರ್‌ಬಿ ಕಂಪನಿ ನಿರ್ವಹಿಸುತ್ತಿರುವ ರಾ.ಹೆ. 66ರ ಕಾಮಗಾರಿಯೂ ಮಳೆಯಿಂದಾಗಿ ಹೊಳೆಯಾಗಿ ಮಾರ್ಪಟ್ಟಿದ್ದು, ಇನ್ನೂ ಅಪೂರ್ಣವಾಗಿಯೇ ಉಳಿದಿದೆ.

ರಂಗಿನಕಟ್ಟೆಯಿಂದ ಶಂಶುದ್ದೀನ್ ವೃತ್ತದವರೆಗಿನ ಹೆದ್ದಾರಿ ಜಲಾವೃತಗೊಂಡಿದ್ದು, ಎಲ್ಲಾ ರೀತಿಯ ವಾಹನಗಳು ಸಂಚರಿಸಲು ಪರದಾಡುವಂತಾಗಿದೆ. ಮಂಗಳವಾರ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನ ಸಂಚಾರಕ್ಕೆ ಸಾರ್ವಜನಿಕರು ಸಹಕರಿಸಿದ್ದು ಕಂಡು ಬಂತು.

ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಪದೇ ಪದೇ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಏಕೆ ಯೋಜನೆ ರೂಪಿಸಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಮುಂದೆ ಇಂತಹ ಸಮಸ್ಯೆಗಳು ಎದುರಾಗದಂತೆ ನಗರಸಭೆ ಸಮಗ್ರ ಯೋಜನೆ ರೂಪಿಸುವುದು ಅತ್ಯಗತ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸದ್ಯಕ್ಕೆ ಮಳೆ ಸ್ವಲ್ಪ ಬಿಡುವು ನೀಡಿದೆ. ಆದರೆ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂನೆ ನೀಡಿದೆ. ತಗ್ಗು ಪ್ರದೇಶಗಳು ಇನ್ನೂ ಜಲಾವೃತವಾಗಿದ್ದು, ನಿರಂತರ ಸವಾಲುಗಳನ್ನು ಸೃಷ್ಟಿಸುತ್ತಿವೆ. ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಪರಿಣಾಮಕಾರಿ ಪರಿಹಾರಗಳನ್ನು ಜಾರಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕಳೆದ ವರ್ಷ ಆಗಷ್ಟ್ ತಿಂಗಳಲ್ಲಿ ಬಿದ್ದ ಮಳೆಯು ಭಟ್ಕಳದ ನಾಲ್ವರನ್ನು ಬಲಿ ತೆಗೆದುಕೊಂಡಿತ್ತು. ನೂರಾರು ಮನೆ ಅಂಗಡಿಗಳಿಗೆ ನೀರು ನುಗ್ಗಿ ಕೋಟ್ಯಾಂತರ ರೂ. ನಷ್ಟವನ್ನುಂಟು ಮಾಡಿತ್ತು. ಇದರಿಂದ ಪಾಠ ಕಲಿಯದ ಅಧಿಕಾರಿಗಳು ನಿರ್ಲಕ್ಷತನ ತೋರಿಸಿದ ಪರಿಣಾಮ ಮತ್ತೇ ಅಂತಹದ್ದೆ ಅನಾಹುತಗಳಿಗೆ ಆಹ್ವಾನ ನೀಡುತ್ತಿರುವುದು ಮಳೆ ಹೆಸರು ಕೇಳಿದರೆ ಜನರನ್ನು ಜನರು ಹೆದರಿಕೊಳ್ಳುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹೆದ್ದಾರಿ ಮತ್ತು ಒಳಚರಂಡಿ ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸಿ ಮಳೆಯ ನೀರು ರಸ್ತೆ ಮೇಲೆ ನಿಲ್ಲದೆ ಸುಲಭವಾಗಿ ಹರಿದುಹೋಗುವಂತಾಗಲು ರಸ್ತೆಯ ಎರಡು ಬದಿ ಚರಂಡಿಯನ್ನು ನಿರ್ಮಿಸಬೇಕು, ಮತ್ತು ಅಪೂರ್ಣಗೊಂಡ ಒಳಚರಂಡಿ(UGD) ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸಿ ಅಗೆದಿರುವ ರಸ್ತೆಯನ್ನು ಸಿಮೆಂಟ್ ಅಥವಾ ಟಾರ್ ಮೂಲಕ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News