ಭಟ್ಕಳ: ಬೃಹತ್ ಬಂಡೆ ಕಲ್ಲು ಕುಸಿತ; ತಪ್ಪಿದ ಭಾರಿ ಅನಾಹುತ

Update: 2023-07-14 12:53 GMT

ಭಟ್ಕಳ: ತಾಲೂಕಿನ ಕೋಣಾರ ಗ್ರಾ.ಪಂ. ವ್ಯಾಪ್ತಿಯ ಬೀಳೂರು ಗ್ರಾಮದಲ್ಲಿ ಭಾರಿ ಗಾತ್ರದ ಬಂಡೆ ಕಲ್ಲೊಂದು ಕುಸಿದಿದ್ದು ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಅಂದಾಜು 500 ಅಡಿ ಎತ್ತರಿಂದ ಜಾರಿ ಬಂದ ಈ ಬಂಡೆಕಲ್ಲು ಮಾರುಕೇರಿ ಕುಂಟವಾಣಿ ರಸ್ತೆಗೆ ತಾಗಿಕೊಂಡಿರುವ ದಿಣ್ಣೆಯೊಂದರ ಮೇಲೆ ನಿಂತುಕೊಂಡಿದೆ. ಒಂದು ವೇಳೆ ಇದು ಅಲ್ಲಿಂದಲೂ ಜಾರಿದ್ದರೆ ಪರಿಸ್ಥಿತಿ ತೀರ ಗಂಭಿರ ಸ್ವರೂಪ ಪಡೆದುಕೊಳ್ಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಆಗಷ್ಟ್ ತಿಂಗಳಲ್ಲಿ ಮುಟ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ನಾಲ್ವರು ಜೀವಂತ ಸಮಾಧಿಯಾಗಿರುವ ಘಟನೆ ತಾಲೂಕಿನ ಜನರ ಮನಸ್ಸಿನಿಂದ ಮರೆಯಾಗಿಲ್ಲ. ವರ್ಷ ಕಳೆಯುವುದಕ್ಕಿಂತ ಮುಂಚೆ ಮತ್ತೊಂದು ಅನಾಹುತಕ್ಕೆ ಭಟ್ಕಳ ತಾಲೂಕು ಸಾಕ್ಷಿಯಾಗುವ ಮುನ್ನ ಗುಡ್ಡಕುಸಿತಕ್ಕೆ ಸಂಬಂಧ ತಾಲೂಕಾಡಳಿತ ಸೂಕ್ತ ಕ್ರಮಗಳನ್ನು ಕೈಕೊಳ್ಳಬೇಕು ಎಂಬ ಕೂಗು ಕೇಳತೊಡಗಿದೆ.

ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸಂಭಾವ್ಯ ಅಪಾಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಕೋಣಾರ ಗ್ರಾಮದ ಗ್ರಾಮ ಪಂಚಾಯಿತಿ ತೀವ್ರ ಕಟ್ಟೆಚ್ಚರ ವಹಿಸಿದೆ.

ಕರಾವಳಿ, ಪಶ್ಚಿಮ ಘಟ್ಟಗಳು ಮತ್ತು ಅರೆ-ಮಲೆನಾಡಿನ ಪ್ರದೇಶಗಳು ಮಣ್ಣಿನ ಸವೆತ ಅಥವಾ ತೊರೆಗಳಲ್ಲಿನ ಸೆಳೆತದಿಂದ ಉಂಟಾಗುವ ಭೂಕುಸಿತಕ್ಕೆ ಆಗಾಗ ಗುರಿಯಾಗುತ್ತಲೆ ಇರುತ್ತವೆ. ಈಗಾಗಲೇ ಭಾರಿ ಕುಸಿತ ಕಂಡಿರುವ ಕೋಣಾರ ಪ್ರದೇಶ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿತ ಸಂಭವಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ನಿರಂತರ ಮಳೆ ಮುಂದುವರಿದರೆ, ಬೆಟ್ಟದ ತಳದಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಹೆಚ್ಚಿದ್ದು, ಬಂಡೆಗಳ ಕುಸಿತ ಮತ್ತು ಸಂಭಾವ್ಯ ವಿನಾಶಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

“ಕೋಣಾರ ಭಾಗದಲ್ಲಿ ಹೆಬ್ಬಂಡೆ ಜಾರಿ ಬಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಪರಿಸ್ಥಿತಿಯನ್ನು ಅವಲೋಕಿಸಲು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ” ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಡಾ.ನಯನಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News