ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮೇಲೆ ಗುಂಡಿನ ದಾಳಿ: ಶ್ಯಾಮರಾಜ್ ಬಿರ್ತಿ ಖಂಡನೆ
ಉಡುಪಿ: ಭೀಮ್ ಆರ್ಮಿ ಮುಖ್ಯಸ್ಥ , ದಲಿತ ಹೋರಾಟಗಾರ ಚಂದ್ರಶೇಖರ್ ಆಝಾದ್ ಮೇಲೆ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ನಡೆದ ಗುಂಡಿನ ದಾಳಿಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ತೀವ್ರವಾಗಿ ಖಂಡಿಸಿದ್ದಾರೆ.
ದೇಶಾದ್ಯಂತ ದಲಿತರನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಇದರ ಭಾಗವಾಗಿಯೇ ದಲಿತ ನಾಯಕರ ಮೇಲೆ ದೇಶಾದ್ಯಂತ ದಾಳಿಗಳು ನಡೆಯುತ್ತಿವೆ ಮತ್ತು ಕೇಸ್ ಗಳನ್ನು ಹಾಕಿ ಅವರ ಹೋರಾಟ ಮತ್ತು ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ.
ಈ ದೇಶದಲ್ಲಿ ಶೋಷಿತ ಸಮುದಾಯ ಅಭಿವೃದ್ಧಿ ಆಗಬಾರದು. ಅವರು ಮೇಲ್ವರ್ಗದವರಿಗೆ ಸರಿಸಮಾನವಾಗಿ ಬೆಳೆಯಬಾರದು ಎಂಬ ಉದ್ದೇಶದಿಂದ ಅಂದು ಜಿಗ್ನೇಶ್ ಮೇವಾನಿ ಮೇಲೆ ಇಂದು ಚಂದ್ರಶೇಖರ್ ಆಝಾದ್ ಮೇಲೆ ಪೂರ್ವನಿಯೋಜಿತ ದಾಳಿ ನಡೆದಿದೆ. ದಲಿತ ಹೋರಾಟಗಾರರ ಮೇಲೆ ಸುಳ್ಳು ದೇಶದ್ರೋಹದ ಕೇಸಗಳನ್ನು ಹಾಕಿ ಅವರನ್ನು ಜೈಲಿಗೆ ತಳ್ಳಿ ಅವರಿಗೆ ಜಾಮೀನು ಸಿಗದಂತೆ ನೋಡಿಕೊಂಡು ದಲಿತರ ಪರ ಹೋರಾಟವನ್ನು ಹತ್ತಿಕ್ಕುವ ಕೆಲಸ ದೇಶಾದ್ಯಂತ ನಡೆಯುತ್ತಿದೆ. ಈ ದಾಳಿಯ ವಿರುದ್ಧ ಇಡೀ ದೇಶದಲ್ಲಿ ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಪ್ರತಿಭಟನಾ ಹೋರಾಟ ರೂಪಿಸಬೇಕಾಗಿದೆ ಎಂದು ಶ್ಯಾಮರಾಜ್ ಬಿರ್ತಿ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ