ತಾಕತ್ತಿದ್ದರೆ ಗ್ಯಾರಂಟಿ ಸ್ಕೀಮ್ ಪಡೆಯದಂತೆ ತಮ್ಮ ಪಕ್ಷದವರಿಗೆ ಬಿಜೆಪಿ ಹೇಳಲಿ: ಹರೀಶ್ ಕುಮಾರ್ ಸವಾಲು

Update: 2023-06-29 12:09 GMT

ಕಾಂಗ್ರೆಸ್‍ನ ಗ್ಯಾರಂಟಿ ಸ್ಕೀಮ್‍ಗಳನ್ನು ವಿರೋಧಿಸಿರುವ ಬಿಜೆಪಿ ನಾಯಕರು ಧಮ್ಮು, ತಾಕತ್ತು ಇದ್ದರೆ ತಮ್ಮ ಪಕ್ಷದವರು ಯಾರೂ ಈ ಯೋಜನೆಗಳನ್ನು ಪಡೆಯಬಾರದೆಂದು ಹೇಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸವಾಲು ಹಾಕಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾತು ಮಾತಿಗೂ ಧಮ್ ತಾಕತ್ತಿನ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಯವರಿಗೆ ಜನ ತಮ್ಮ ಧಮ್ ತಾಕತನ್ನು ಚುನಾವಣೆಯಲ್ಲಿ ತೋರಿಸಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ಜನರು ಸಂತಸದಲ್ಲಿದ್ದಾರೆ. ಇದನ್ನು ನೋಡಲು ಸಾಧ್ಯವಾಗದೆ ಬಿಜೆಪಿ ನಾಯಕರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಜಿಲ್ಲೆಗೆ ಬೆಂಕಿ ಕೊಡುತ್ತೇನೆ ಅಂದ ಬಿಜೆಪಿಯ ರಾಜ್ಯಾಧ್ಯಕ್ಷರು ತಮ್ಮ ಪಕ್ಷಕ್ಕೆ ಬೆಂಕಿ ಕೊಟ್ಟಿದ್ದಾರೆ. ಬಿಜೆಪಿಯ ಮನೆಯೊಂದು ಬಾಗಿಲು ಹತ್ತಾಗಿದೆ. ಯಾರು ಏನು ಮಾತನಾಡುತ್ತಾರೆಂದು ಗೊತ್ತಾಗುತ್ತಿಲ್ಲ. ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ನಿಯಂತ್ರಿಸಲು 56 ಇಂಚಿನ ಎದೆಯವರಿಗೂ ಸಾಧ್ಯವಾಗುತ್ತಿಲ್ಲ ಎಂದು ಹರೀಶ್ ಕುಮಾರ್ ಹೇಳಿದರು.

ಕೇಂದ್ರದ ಷಡ್ಯಂತ್ರದಿಂದ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾದಿಂದ ರಾಜ್ಯಕ್ಕೆ ಅಕ್ಕಿ ಸಿಗದಂತಾಗಿದೆ. ಅಕ್ಕಿ ದಾಸ್ತಾನು ಸಾಕಷ್ಟಿದ್ದರೂ ನೀಡಲಾಗುತ್ತಿಲ್ಲ. ಹಾಳಾದರೂ ಪರವಾಗಿಲ್ಲಬಡವರಿಗೆ ನೀಡಬಾರದು ಎಂಬ ಉದ್ದೇಶ ಕೇಂದ್ರ ಸರಕಾರದ್ದು. ರಾಜ್ಯ ಸರಕಾರ ತಾನು ನೀಡಿರುವ ಆಶ್ವಾಸನೆಯಂತೆ ಜನತೆಗೆ ಐದು ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಬೇರೆ ರಾಜ್ಯಗಳಿಂದ ಪ್ರಯತ್ನ ನಡೆಸಿತ್ತು. ಆದರೆ ಸಾಧ್ಯವಾಗದೆ ಇದೀಗ ಅಕ್ಕಿ ಲಭ್ಯ ಆಗುವವರೆಗೆ ತಲಾ 34 ರೂ.ನಂತೆ ಐದು ಕೆಜಿ ಹಣವನ್ನು ನೀಡುವ ತೀರ್ಮಾನಕ್ಕೆ ಸಿದ್ಧರಾಮಯ್ಯ ಸರಕಾರ ಮುಂದಾಗಿದ್ದರೂ ಬಿಜೆಪಿ ಒಪ್ಪಲು ತಯಾರಿಲ್ಲ ಎಂದು ಹರೀಶ್ ಕುಮಾರ್ ದೂರಿದರು.

ಐದು ಕೆಜಿಯನ್ನು ಏಳು ಕೆಜಿ ಮಾಡಿ ಸರಕಾರ ನೀಡುತ್ತಿದ್ದುದನ್ನು ಬಿಜೆಪಿ ಸರಕಾರ ಐದು ಕೆಜಿಗೆ ಇಳಿಸಿತ್ತು. ಚುನಾವಣೆಯ ಸಂದರ್ಭ ಕಾಂಗ್ರೆಸ್ ಈ ಬಗ್ಗೆ ಹೇಳಿಕೆ ನೀಡಿ ಸರಕಾರ ಬಂದಲ್ಲಿ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಹೇಳಿತ್ತು. ಹೆಚ್ಚುವರಿ 10 ಕೆಜಿ ನೀಡುವುದಾಗಿ ಎಲ್ಲಿಯೂ ಕಾಂಗ್ರೆಸ್ ಹೇಳಿಕೊಂಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಹರೀಶ್ ಕುಮಾರ್ ಉತ್ತರಿಸಿದರು.

ಉಚಿತ ನೀಡಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದ ಮುಖ್ಯಮಂತ್ರಿ ಪ್ರತಿ ಮಹಿಳೆಗೆ ತಿಂಗಳಿಗೆ 1 ಸಾವಿರ ರೂ. ಘೋಷಣೆ ಮಾಡಿರುವುದು ಬಿಟ್ಟಿ ಭಾಗ್ಯ ಅಲ್ವಾ? ಪ್ರಧಾನಿ ಹೇಳಿಕೆ ಇವರಿಗೆ ಅನ್ವಯ ಆಗುವುದಿಲ್ಲವೇ ಎಂದವರು ಪ್ರಶ್ನಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೇಶದಲ್ಲೇ ಮೊದಲು ಅನ್ನಭಾಗ್ಯ ಯೋಜನೆ ತಂದಿದ್ದು ಸಿದ್ಧರಾಮಯ್ಯ. ಅದಕ್ಕಾಗಿಯೇ ಅವರನ್ನು ಅನ್ನ ರಾಮಯ್ಯ ಅನ್ನುತ್ತಾರೆ ಎಂದರು.

ಅಕ್ಕಿ ಪ್ರಧಾನಿಯವರದ್ದು ಅಂತಾರೆ. ಮೋದಿ ಭತ್ತ ಬೆಳೆಸುತ್ತಾರಾ? ಫುಡ್ ಕಾರ್ಪೊರೇಶನ್ ಕಾಯ್ದೆ ತಂದಿದ್ದೇ ಯುಪಿಎ ಸರಕಾರ. ಸುಳ್ಳು ಹೇಳುವುದೇ ಬಿಜೆಪಿ ಜಾಯಮಾನ. ಅವರಿಗೆ ಎರಡು ನಾಲಗೆ. ಕಾಂಗ್ರೆಸ್‍ನ ಅನ್ನಭಾಗ್ಯ ಕನ್ನಡಿಗರಿಗೆ ಒಂದು ವರ ಎಂದು ಅಭಯಚಂದ್ರ ಜೈನ್ ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ನವೀನ್ ಡಿಸೋಜಾ, ಶುಭೋದಯ ಆಳ್ವ, ಸಂತೋಷ್ ಶೆಟ್ಟಿ, ನೀರಜ್ ಪಾಲ್, ಉಮೇಶ್ ದಂಡೆಕೇರಿ, ಸುಭಾಷ್ ಕೊಲ್ನಾಡ್, ಚಂದ್ರಕಲಾ, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News